Bhatkal: ಮತ್ಸ್ಯ ಮೇಳ ಅನುಮೋದನೆಯಿಲ್ಲದೇ 9.85 ಕೋಟಿ ವೆಚ್ಚ,ನಿಯಮ ಉಲ್ಲಂಘನೆಯ ರಹಸ್ಯ ಬಿಚ್ಚಿಟ್ಟ THE- FILE
Bhatkal: ಮತ್ಸ್ಯ ಮೇಳ ಅನುಮೋದನೆಯಿಲ್ಲದೇ 9.85 ಕೋಟಿ ವೆಚ್ಚ,ನಿಯಮ ಉಲ್ಲಂಘನೆಯ ರಹಸ್ಯ ಬಿಚ್ಚಿಟ್ಟ THE- FILE

ಬೆಂಗಳೂರು; ಉತ್ತರ ಕನ್ನಡ (uttara kannda)ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ ,ಬಂದರು ಸಚಿವ ಮಂಕಾಳು ವೈದ್ಯ ರವರು 2024 ರ ನವಂಬರ್ 21 ರಿಂದ 23 ರ ವರೆಗೆ ಮುರುಡೃಶ್ವರದ ತಮ್ಮ ಕ್ಷೇತ್ರದಲ್ಲಿ ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯ ಮೇಳವನ್ನು ಆಯೋಜನೆ ಮಾಡಿದ್ದರು.
ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯ ಮೇಳಕ್ಕೆ ಬರೋಬ್ಬರಿ 9.85 ಕೋಟಿ ರು ಖರ್ಚು ಮಾಡಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಈ ವೆಚ್ಚಕ್ಕೆ ಆರ್ಥಿಕ ಇಲಾಖೆಯ ಅನುಮೋದನೆಯನ್ನೇ ಪಡೆದುಕೊಂಡಿರಲಿಲ್ಲ ಎಂಬುದು ದಿ ಫೈಲ್ಸ್ ಸುದ್ದಿ ಜಾಲತಾಣವು ಪಡೆದುಕೊಂಡ ಆರ್‍ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಈ ಸಂಬಂಧ ‘ದಿ ಫೈಲ್’ ಆರ್‍ಟಿಐ (RTI)ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡು ವರದಿ ಮಾಡಿದೆ.
ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆಯೇ 9.85 ಕೋಟಿ ರು ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಸಹ ಯಾರನ್ನೂ ಹೊಣೆಗಾರರನ್ನಾಗಿಸಿಲ್ಲ, ಕನಿಷ್ಠ ಶಿಸ್ತು ಕ್ರಮವನ್ನೂ ಜರುಗಿಸಿಲ್ಲ. 2024ರಲ್ಲೇ ನಡೆದಿದ್ದ ಕಾರ್ಯಕ್ರಮದ ವೆಚ್ಚಕ್ಕೆ 2025ರ ಜನವರಿ 23 ರಂದು ಘಟನೋತ್ತರವಾಗಿ 4 (ಜಿ) ಅನುಮೋದನೆ ನೀಡಿ ಆದೇಶವನ್ನೂ ಹೊರಡಿಸಿದೆ.
ಘಟನೋತ್ತರವಾಗಿ ಅನುಮೋದನೆ ನೀಡಲು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಅವಕಾಶವೇ ಇಲ್ಲ. ಅಲ್ಲದೇ ಈ ಕಾರ್ಯಕ್ರಮಕ್ಕೆ ಅನುದಾನವೂ ಮಂಜೂರಾಗಿರಲಿಲ್ಲ. ಈ ಸಂಬಂಧ ಕಡತಗಳಲ್ಲಿಯೂ ಯಾವುದೇ ಮಾಹಿತಿಯೂ ಇರಲಿಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 9.85 ಕೋಟಿ ರು ವೆಚ್ಚ ಮಾಡಿರುವುದಕ್ಕೆ ಘಟನೋತ್ತರವಾಗಿ ಅನುಮೋದನೆ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ನಿಯಮಗಳ ಪ್ರಕಾರ ಕಾರ್ಯಕ್ರಮ ಆಯೋಜಿಸುವ ಮುನ್ನ ಕಾರ್ಯಕ್ರಮಕ್ಕೆ ತಗುಲುವ ವೆಚ್ಚ ಮತ್ತು 4 (ಜಿ) ಕೋರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ನಂತರವಷ್ಟೇ ಕಾರ್ಯಕ್ರಮಕ್ಕೆ ವೆಚ್ಚ ಮಾಡಬೇಕು.
ಸರ್ಕಾರದ ಅನುಮೋದನೆಯಿಲ್ಲದೆಯೇ ಮತ್ಸ ಮೇಳವನ್ನು ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಿದ್ದ ಇಲಾಖೆಯು ಈಗಾಗಲೇ ಕಾರ್ಯಕ್ರಮ ಮುಗಿದು ಹೋಗಿರುವ ಕಾರಣ ಘಟನೋತ್ತರವಾಗಿ 4 (ಜಿ) ಅನುಮೋದನೆ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 2024ರ ನವೆಂಬರ್ 21ರಿಂದ 234ವರೆಗೆ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮೂರು ದಿನಗಳ ಮತ್ಸ್ಯ ಮೇಳ ನಡೆಸಿತ್ತು. ಈ ಕಾರ್ಯಕ್ರಮಕ್ಕೆ 9,85,86,858 ರು.ಗಳನ್ನು ವೆಚ್ಚ ಮಾಡಿತ್ತು. ಈ ಕಾರ್ಯಕ್ರಮವನ್ನು ಕರ್ನಾಟಕ ಸ್ಟೇಟ್ ಮಾರ್ಕೇಂಟಿಂಗ್ ಕಮ್ಯುನಿಕೇಷನ್ಸ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಮೂಲಕ ಆಯೋಜಿಸಿತ್ತು. ಈ ಕಾರ್ಯಕ್ರಮ ನವೆಂಬರ್‍ನಲ್ಲಿ ನಡೆಸಲು ಮೊದಲೇ ಸಿದ್ಧತೆ ನಡೆಸಿತ್ತಾದರೂ 9.85 ಕೋಟಿ ರು ವೆಚ್ಚದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಗೆ ಸಲ್ಲಿಸಿರಲಿಲ್ಲ.
ಕಾರ್ಯಕ್ರಮ ಮುಗಿದ ನಂತರ ಘಟನೋತ್ತರವಾಗಿ ಅನುಮೋದನೆ ಪಡೆಯಲು ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಆರ್‍ಟಿಐ ದಾಖಲೆಗಳಿಂದ ತಿಳಿದು ಬಂದಿದೆ.
ಘಟನೋತ್ತರವಾಗಿ ಅನುಮೋದನೆ ಪಡೆಯಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ‘ ಪ್ರಸ್ತಾಪಿತ ಕಾರ್ಯಕ್ರಮವು ಈಗಾಗಲೇ 2024ರ ನವೆಂಬರ್ 21ರಿಂದ 23ರವರೆಗೆ ನಡೆದು ಮುಕ್ತಾಯವಾಗಿರುತ್ತದೆ.
ಇದನ್ನೂ ಓದಿ:-Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿ ಘಟನೋತ್ತರವಾಗಿ ವಿನಾಯಿತಿ ನೀಡಲು ಅವಕಾಶವಿಲ್ಲ. ಅಲ್ಲದೇ ಪ್ರಸ್ತಾಪಿತ ಕಾರ್ಯಕ್ರಮಕ್ಕೆ ಅನುದಾನ ಮಂಜೂರು ಮಾಡಲು ಕೋರಿದೆ. ಆದರೆ ಅನುದಾನ ಒದಗಿಸಿರುವ ಬಗ್ಗೆ ಇಲಾಖೆಯ ವೆಚ್ಚ-4 ಶಾಖೆಯ ಕಡತದಲ್ಲಿ ಯಾವುದೇ ಮಾಹಿತಿಗಳೂ ಲಭ್ಯವಿಲ್ಲ, ಎಂದು ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ದಾಖಲಿಸಿತ್ತು. ಈ ಅಭಿಪ್ರಾಯಕ್ಕೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಕೂಡ ಅನುಮೋದಿಸಿದ್ದರು.
ಆದರೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿದ್ದ ಎಲ್ ಕೆ ಅತೀಕ್ ಅವರು ಘಟನೋತ್ತರವಾಗಿ ಅನುಮೋದನೆ ನೀಡಲು ಒಪ್ಪಿಗೆ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈಗಾಗಲೇ ಕಾರ್ಯಕ್ರಮವು ಮುಕ್ತಾಯವಾಗಿದೆ. ಇದನ್ನು ಪರಿಗಣಿಸಬೇಕು. ಮತ್ತು ಅನುದಾನವನ್ನು ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಆರ್ಥಿಕ ಇಲಾಖೆಯ ಪೂರ್ವಾನುಮತಿ ಇಲ್ಲದೆಯೇ ಕಾರ್ಯಕ್ರಮ ನಡೆಸಬಾರದು ಎಂದು ಇಲಾಖೆಗೆ ನಿರ್ದೇಶನ ನೀಡಬೇಕು,’ ಟಿಪ್ಪಣಿ ಹಾಳೆಯಲ್ಲಿ ನಿರ್ದೇಶಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಆರಂಭದಲ್ಲಿ ಇದ್ದದ್ದು 2.40 ಕೋಟಿ ವೆಚ್ಚದ ಪ್ರಸ್ತಾವನೆ ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯ ಮೇಳದಲ್ಲಿ ನವೀನ ಮೀನುಗಾರಿಕೆ ತಂತ್ರಗಳು, ಪರಿಸರ ಸ್ನೇಹಿ ಮೀನುಗಾರಿಕೆ ಪದ್ಧತಿಗಳ ಪ್ರಾತ್ಯಕ್ಷಿಕೆ ಮತ್ತು ಆಧುನಿಕ ಉಪಕರಣಗಳ ಪ್ರದರ್ಶನ, ಕಾರ್ಯಗಾರ, ವಿಚಾರ ಗೋಷ್ಠಿ, ಸಮರ್ಥನೀಯ ಮೀನುಗಾರಿಕೆ ಮತ್ತು ಆಧುನಿಕ ಅಭ್ಯಾಸಗಳ ಕುರಿತು ತಜ್ಞರ ನೇತೃತ್ವದ ಅಧಿವೇಶನಗಳು, ಮೀನುಗಾರರು, ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳಿಗೆ ಸಂವಾದಾತ್ಮಕ ಕಾರ್ಯಗಾರಗಳು ನಡೆದಿದ್ದವು. ಇದಕ್ಕಾಗಿ 2.40 ಕೋಟಿ ಎಂದು ಇಲಾಖೆಯು ಆರಂಭದಲ್ಲಿ ಅಂದಾಜಿಸಿತ್ತು. ಕಾರ್ಯಕ್ರಮ ಸಂಬಂಧ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತಿಗೆ 30.00 ಲಕ್ಷ ರು., ವೇದಿಕೆ ನಿರ್ಮಾಣ ಮತ್ತು ನಿರ್ವಹಣೆಗೆ 30 ಲಕ್ಷ ರು., 3 ದಿನಗಳ ಮತ್ಸ್ಯ ಮೇಳ ಆಯೋಜನೆಗೆ 75 ಲಕ್ಷ, ಇಲಾಖೆಯ ವಿವಿಧ ಯೋಜನೆಗಳ ಕರಪತ್ರ ಮತ್ತು ಬಿತ್ತಿಪತ್ರಗಳ ಮುದ್ರಣಕ್ಕೆ 10.00 ಲಕ್ಷ, ಕಾರ್ಯಕ್ರಮ ನಡೆಯುವ ಸ್ಥಳದ ಬಾಡಿಗೆ ಮತ್ತು ನಿರ್ವಹಣೆಗೆ 15.00 ಲಕ್ಷ, ಊಟೋಪಚಾರ (ವಿವಿಐಪಿ, ಅಧಿಕಾರಿಗಳು, ಮೀನುಗಾರರಿಗೆ) 30 ಲಕ್ಷ ರು., ವಿಐಪಿಗಳು, ಗಣ್ಯರು, ತಜ್ಞರ ವಾಸ್ತವ್ಯಕ್ಕೆ 15 ಲಕ್ಷ, ಕಾಣಿಕೆ ಮತ್ತು ಪ್ರಶಸ್ತಿ ಫಲಕಗಳಿಗೆ 15 ಲಕ್ಷ , ಸಾಂಸ್ಕೃತಿಕ ಚಟುವಟಿಕೆಗಳೀಗೆ 20 ಲಕ್ಷ ಸೇರಿ ಒಟ್ಟಾರೆ 2.40 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು.
ಈ ವೆಚ್ಚದ ಪ್ರಸ್ತಾವನೆಗೆ ಮಾತ್ರ ಆರ್ಥಿಕ ಇಲಾಖೆಗೆ ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು ಎಂದು ಇಲಾಖೆಯ ನಿರ್ದೇಶನಾಲಯದಿಂದ ಕೋರಲಾಗಿತ್ತು. ಆದರೆ ಹಿಂದಿನ ವರ್ಷದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆಗಾಗಿ ಯಾವುದೇ ಅನುದಾನ ನಿಗದಿಪಡಿಸಿರಲಿಲ್ಲ. ಆದರೆ ಇತರೆ ಲೆಕ್ಕ ಶೀರ್ಷಿಕೆ ( 2405-00-001-0-101-200) ಯಡಿ ಅನುದಾನದಿಂದ ಮರು ಹೊಂದಾಣಿಕೆ ಮೂಲಕ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಯು 2023ರ ಡಿಸೆಂಬರ್ 14ರಂದು ಹಿಂಬರಹ ನೀಡಿತ್ತು.
ಸಚಿವರ ಸೂಚನೆಯಂತೆ 9.85 ಕೋಟಿಗೆ ಪರಿಷ್ಕರಣೆ ಅದರಂತೆ ಎರಡು ಲೆಕ್ಕ ಶೀರ್ಷಿಕೆಗಳ ಮೂಲಕ 80 ಮತ್ತು 50 ಲಕ್ಷ ರುಗ.ಳನ್ನು ಮರು ಹೊಂದಾಣಿಕೆ ಮೂಲಕ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಇಲಾಖೆಯು 2024-25ನೇ ಸಾಲಿಗೆ ಹೆಚ್ಚುವರಿಯಾಗಿ 9.85 ಕೋಟಿ ರು ಅನುದಾನ ಕೋರಿತ್ತು.
‘ವಿಶ್ವ ಮೀನುಗಾರಿಕೆ ದಿನವನ್ನು ಪ್ರಪಂಚದಾದ್ಯಂತ ಮೀನುಗಾರಿಕೆ ಸಮುದಾಯಗಳಿಂದ ಪ್ರತೀ ವರ್ಷ ನವೆಂಬರ್ 21ಂದು ಆಚರಿಸಲಾಗುತ್ತಿದೆ. ಇದು ಜೀವನೋಪಾಯ ಮತ್ತು ಆಹಾರ ಭದ್ರತೆ ಸೃಷ್ಟಿಸಲು ಮೀನುಗಾರಿಕೆ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮೀನುಗಾರರ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳು ಬಗ್ಗೆ ಅರಿವು ಮೂಡಿಸಲು ಮತ್ತು ಆಹಾರ ಭದ್ರತೆ ಒದಗಿಸಲು ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಮೀನುಗಾರಿಕೆ ಪಾತ್ರ ಎತ್ತಿ ಹಿಡಿಯಲು ನಿರ್ಣಾಯಕ ವೇದಿಕೆಯಾಗಿದೆ. ಹೀಗಾಗಿ 9.85 ಕೋಟಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಸಚಿವ ಮಂಕಾಳ ವೈದ್ಯ ಅವರು ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು.
ಎಕ್ಸಿಬಿಷನ್ ಸ್ಟಾಲ್, ಜರ್ಮನ್ ಟೆಂಟ್, ಕೃತಕ ಮೀನುಗಾರಿಕೆ ವಾಟರ್ ಟನಲ್‌ಗೆ 44.00 ಲಕ್ಷ ರು., ಒಕ್ಟೋನೋರಮ್ ಸ್ಟಾಲ್‌ಗಳಿಗೆ 4.80 ಲಕ್ಷ ರು., ವೇದಿಕೆ ಮತ್ತು ಫ್ಯಾಬ್ರೀಕೇಷನ್‌ಗೆ 46.33 ಲಕ್ಷ ರು., ಸ್ಕ್ಯಾಪ್ ಫೋಲ್ಡ್‌ಗೆ 10.00 ಲಕ್ಷ ರು., ಬ್ರ್ಯಾಂಡಿಂಗ್ ಪ್ಯಾನೆಲ್ಸ್‌ಗೆ10.62 ಲಕ್ಷ ರು., ಥಿಮ್ಯಾಟಿಕ್ ಆರ್ಚ್ ನಿರ್ಮಾಣಕ್ಕೆ 5.00 ಲಕ್ಷ, ಸಾಮಾನ್ಯ ವೇದಿಕೆಗೆ 7.20 ಲಕ್ಷ ರು., ವಿವಿಐಪಿ ಸೋಫಾಗಳಿಗೆ 4.50 ಲಕ್ಷ ರು., ವಿವಿಐಪಿ ಕುರ್ಚಿಗಳಿಗೆ 10.50 ಲಕ್ಷ ರು., ಬ್ಯಾರಿಕೇಡ್‌ಗಳಿಗೆ 25.50 ಲಕ್ಷ ರು., ಸಂಚಾರಿ ಶೌಚಾಲಯ ಘಟಕಗಳಿಗೆ 5.25 ಲಕ್ಷ ಎಂದು ಅಂದಾಜಿಸಿತ್ತು.
ಎಲ್‌ಇಡಿ ಲೈಟಿಂಗ್ಸ್‌ಗಳಿಗೆ 10.50 ಲಕ್ಷ, ವಿಡಿಯೋ ಜಾಕಿಗೆ 1.50 ಲಕ್ಷ, ಸ್ಪೀಕರ್, ಸೌಂಡ್ ಉಪಕರಣಗಳಿಗೆ 29.50 ಲಕ್ಷ, ಕಲರ್ ವಾಷ್‌ಗೆ 16.45 ಲಕ್ಷ, ಕೃತಕ ಅಕ್ವೇರಿಯಂಗಳಿಗೆ 59.45 ಲಕ್ಷ, ಐದು ನಿಮಿಷದ ವಿಡಿಯೋ ಡಾಕ್ಯುಮೆಂಟರಿ ಮತ್ಗೆತು 2 ನಿಮಿಷದ ಪ್ರೋಮೋಗೆ 10.00 ಲಕ್ಷ, ಫೋಟೋ, ವಿಡಿಯೋಗ್ರಾಫಿ ಮತ್ತು ನೇರ ಪ್ರಸಾರಕ್ಕೆ 15.00 ಲಕ್ಷ, ಸೆಲೆಬ್ರಿಟಿ ಕಲಾವಿದರಿಗೆ ಗೌರವ ಧನ ಮತ್ತು ಕಾರ್ಯಕ್ರಮ ನಡೆಸಿಕೊಡಲು ಒಟ್ಟಾರೆ 64.00 ಲಕ್ಷ ಅಂದಾಜಿಸಿತ್ತು.
ವಿವಿಐಪಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 6.00 ಲಕ್ಷ, ಹೋರ್ಡಿಂಗ್ಸ್ ಮತ್ತು ಜಾಹೀರಾತಿಗೆ 30.00 ಲಕ್ಷ, ಸಾರಿಗೆ ಸಂಪರ್ಕಕ್ಕೆ 10.00 ಲಕ್ಷ ರು , ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಿಗೆ ಮೊಮೆಂಟ್‌ಗಳಿಗೆ 1.75 ಲಕ್ಷ, ಶಾಲು, ಹಾರು, ಪೇಟ, ಹಣ್ಣುಗಳಿಗೆ 4.50 ಲಕ್ಷ, ಇತರೆ ಸಾರ್ವಜನಿಕ ಚಟುವಟಿಕೆಗಳಿಗೆ 9.47 ಲಕ್ಷ, ಅಧಿಕಾರಿಗಳ ವಾಸ್ತವ್ಯಕ್ಕೆ 7.50 ಲಕ್ಷ ರೂ ಈ ವೆಚ್ಚದಲ್ಲಿ ಒಳಗೊಂಡಿತ್ತು.
ಮೂಲ ಮಾಹಿತಿ-The files