panchagavya:-ಪಂಚಗವ್ಯ ತಯಾರಿಸೋದು ಹೇಗೆ ? ಏನಿದರ ಉಪಯೋಗ ವಿವರ ನೋಡಿ.
panchagavya:-ಪಂಚಗವ್ಯ ತಯಾರಿಸೋದು ಹೇಗೆ ? ಏನಿದರ ಉಪಯೋಗ ವಿವರ ನೋಡಿ.
ಪಂಚಗವ್ಯ (panchagavya)ಎಂಬುದು ಸಾವಯವ ಕೃಷಿಯಲ್ಲಿ ಬಳಸುವ ದ್ರವರೂಪದ ಗೊಬ್ಬರ / ಬೆಳೆ ಪ್ರಚೋದಕವಾಗಿದ್ದು, ಪಂಚಗವ್ಯವು ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಬೆಳೆಗಳಲ್ಲಿ ಹೂವಾಗುವಿಕೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣ ಹೊಂದಿದೆ.
ಹಾಗಿದ್ರೆ ಈ ಪಂಚಗವ್ಯವನ್ನು ತಯಾರಿಸುವ ವಿಧಾನ ಯಾವುದು ಏನು ಉಪಯೋಗ ಎಂಬ ಬಗ್ಗೆ ರೈತರಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಪಂಚಗವ್ಯ ತಯಾರಿಸಲು ಬೇಕಾದ ಸಾಮಗ್ರಿಗಳು:
ಸಗಣಿ-7ಕೆ.ಜಿ.,ಹಸುವಿನ ತುಪ್ಪ-1 ಕೆ.ಜಿ., ಗಂಜಲ-10 ಲೀ., ನೀರು-10 ಲೀ.. ಹಾಲು 3ಲೀ., ಮೊಸರು-2 ಲೀ., ಎಳನೀರು-3 ಲೀ., ಬೆಲ್ಲ-3 ಕೆ.ಜಿ,ಮೊಸರು-2 ಲೀ., ಬೆಲ್ಲ-3 ಕೆ.ಜಿ., ಬಾಳೆಹಣ್ಣು-12.
ಪಂಚಗವ್ಯ ತಯಾರಿಸುವ ವಿಧಾನ.

ಮೊದಲನೆಯ ದಿನ ಒಂದು ಐವತ್ತು ಲೀಟರ್ ಸಾಮರ್ಥ್ಯದ ಅಗಲವಾದ ಬಾಯಿ ಹೊಂದಿರುವ ಪ್ಲಾಸ್ಟಿಕ್/ ಕಾಂಕ್ರಿಟ್ ತೊಟ್ಟಿಯಲ್ಲಿ ಅದಕ್ಕೆ ಏಳು ಕೆಜಿ ಸಗಣಿ ಹಾಗೂ ಒಂದು ಕೆಜಿ ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಬೇಕು. ತದನಂತರ ಎರಡು ದಿನಗಳ ಕಾಲ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡುತ್ತಿರಬೇಕು.
ಮೂರನೆಯ ದಿನ ಈ ಮಿಶ್ರಣಕ್ಕೆ 10 ಲೀ. ನೀರು ಹಾಗೂ 10 ಲೀ. ಗಂಜಲವನ್ನು ಬೆರಸಿ ಚೆನ್ನಾಗಿ ಕಲಸಬೇಕು. ಈ ಮಿಶ್ರಣವನ್ನು ಮುಂದಿನ 15 ದಿನಗಳ ಕಾಲ ಬೆಳಗ್ಗೆ ಹಾಗೂ ಸಂಜೆ ಒಮ್ಮೆ ಕೋಲಿನ ಸಹಾಯದಿಂದ ವೃತ್ತಾಕಾರವಾಗಿ ಕಲಕುತ್ತಿರಬೇಕು.
ಇದನ್ನೂ ಓದಿ:-Agriculture | ಕೃಷಿ ಆಸಕ್ತರಿಗೊಂದು ಅವಕಾಶ ಈಗಲೇ ಅರ್ಜಿ ಸಲ್ಲಿಸಿ.
ಹದಿನಾರನೆ ದಿನ ಈ ಮಿಶ್ರಣಕ್ಕೆ 3 ಲೀ. ಹಸುವಿನ ಹಾಲು, 2 ಲೀ. ಮೊಸರು, 3 ಲೀ. ಎಳನೀರು, 3 ಕೆಜಿ ಬೆಲ್ಲ ಹಾಗೂ 12 ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 6 ದಿನಗಳ ಕಾಲ ಕಳೆಯಲು ಬಿಡಬೇಕು. ಈ ಸಮಯದಲ್ಲೂ ಸಹ ದಿನಕ್ಕೆ ಎರಡು ಬಾರಿ ಚೆನ್ನಾಗಿ ಕೋಲಿನಿಂದ ವೃತ್ತಾಕಾರವಾಗಿ ಕಲಕುತ್ತಿರಬೇಕು. ಹೀಗೆ ತಯಾರಿಸಿದ ದ್ರಾವಣವನ್ನು ಎರಡು ವಾರಗಳ ನಂತರ ಸೋಸಿ ಸಿಂಪರಣೆಗೆ ಉಪಯೋಗಿಸಬೇಕು.

ಪಂಚಗವ್ಯದ ರಾಸಾಯನಿಕ ಮತ್ತು ಜೈವಿಕ ವಿಶ್ಲೇಷಣೆ.
ಪಂಚಗವ್ಯದ ರಾಸಾಯನಿಕ ವಿಶ್ಲೇಷಣೆ ನಡೆಸಿದಾಗ ಮುಖ್ಯ ಪೋಷಕಾಂಶಗಳು, ಲಘುಪೋಷಕಾಂಶಗಳು ಹಾಗೂ ಬೆಳೆ ಪ್ರಚೋದಕಗಳಾದ ಇಂಡೋಲ್ ಅಸಿಟಿಕ್ ಆಸಿಡ್ (8.5 ಪಿಪಿಎಂ) ಹಾಗೂ ಜಿಬ್ಬರ್ಲಿಕ್ ಆಸ್ಕಿಡ್ (3.5 ಪಿಪಿಎಂ) ಇರುವುದು ಕಂಡುಬಂದಿದೆ. ಇದರ ಜೊತೆಗೆ ಪಂಚಗವ್ಯದಲ್ಲಿ ಲ್ಯಾಕ್ಟೋಬ್ಯಾಸಿಲಸ್ ಸಂಖ್ಯೆ ಹೆಚ್ಚಾಗಿದ್ದು (2260000 / 2.0.), ಬಿಡುಗಡೆಯಾಗುವ ಆರ್ಗಾನಿಕ್ ಆಸಿಡ್, ಹೈಡೋಜನ್ ಪೆರಾಕ್ಸೆಡ್ ಮತ್ತು ಆಂಟಿಬಯೋಟೆಕ್ಸ್ ಕ್ರಿಮಿ ಕೀಟಗಳ ಹತೋಟಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಬಳಸುವ ವಿಧಾನ:
ಒಂದು ಎಕರೆ ಪ್ರದೇಶಕ್ಕೆ ಬೇಕಾದ 250 ಲೀ.ಸಿಂಪಡಣಾ ದ್ರಾವಣಕ್ಕೆ 7.5 ಲೀ. ಪಂಚಗವ್ಯವನ್ನು ಮಿಶ್ರಣ ಮಾಡಿ (ಶೇ.3), ಹೂ ಬಿಡುವ ಸಮಯ ಮತ್ತು 15 ದಿನಗಳ ನಂತರ ಇನ್ನೊಮ್ಮೆ ಪತ್ರ ಸಿಂಚನದ ಮೂಲಕ ಪಂಚಗವ್ಯವನ್ನು ಒದಗಿಸುವುದರಿಂದ ಕ್ಷೇತ್ರ ಬೆಳೆಗಳಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಎಕರೆಗೆ 30 ಲೀ. ಪಂಚಗವ್ಯವನ್ನು ಹೂ ಬಿಡುವ ಸಮಯದಲ್ಲಿ ನೀರಿನ ಜೊತೆ ಕೊಡಬಹುದಾಗಿದೆ ಅಥವಾ 100 ಲೀ. ಸಿಂಪಡಣಾ ದ್ರಾವಣಕ್ಕೆ 3 ಲೀ. ಪಂಚಗವ್ಯವನ್ನು ಮಿಶ್ರಣ ಮಾಡಿ (ಶೇ. 3) ಪತ್ರ ಸಿಂಚನದ ಮೂಲಕವು ಕೊಡಬಹುದಾಗಿದೆ.