Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
ಕಾರವಾರ/ನವದೆಹಲಿ: ಇತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡಂತೆ ಪ್ರಸ್ತಾವಿತ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಯ ವಿರೋಧದ ನಡುವೆ ಇದೀಗ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಮಂಡಳಿಯ ಸದಸ್ಯರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನಿರ್ದೇಶನ ನೀಡಿದೆ.
ನವದೆಹಲಿಯಲ್ಲಿ ನಡೆದ ಮಂಡಳಿಯ ಸ್ಥಾಯಿ ಸಮಿತಿಯ 85ನೇ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಕ್ಕೆ ಮಂಡಳಿಯ ಇಬ್ಬರು ಸದಸ್ಯರು ಜೂನ್‌ನಲ್ಲಿ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಯೋಜನೆಯು ಪಶ್ಚಿಮ ಘಟ್ಟದ ಹೃದಯ ಭಾಗದಲ್ಲೇ ಅನುಷ್ಠಾನಗೊಳ್ಳಲಿದೆ.
ಈ ಪ್ರದೇಶವನ್ನು ಯುನೆಸ್ಕೊದ ಜೀವವೈವಿಧ್ಯ ತಾಣವೆಂದು ಗುರುತಿಸಲಾಗಿದೆ. ಒಂದು ವೇಳೆ, ಯೋಜನೆ ಅನುಷ್ಠಾನಗೊಂಡರೆ ಅಪಾರ ಹಾನಿ ಆಗಲಿದೆ ಎಂದು ಎಚ್ಚರಿಸಿದ್ದರು.
ಶರಾವತಿ ಪಂಪ್ಸ್ ಸ್ಟೋರೇಜ್‌ನಂತಹ ದೊಡ್ಡ ಯೋಜನೆಗಳನ್ನು ಪರಿಶೀಲಿಸಲು ಸಾಕಷ್ಟು ಸಮಯದ ಅಗತ್ಯ ಇದೆ. ತರಾತುರಿಯಲ್ಲಿ ಅನುಮೋದನೆ ನೀಡಿರುವುದು ಸರಿಯಲ್ಲ. ಪ್ರಸ್ತಾವನೆಯನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಸದಸ್ಯರಾದ ಎಚ್.ಎಸ್.ಸಿಂಗ್ ಹಾಗೂ ಆರ್.ಸುಕುಮಾರ್ ಸಭೆಯಲ್ಲಿ ಆಗ್ರಹಿಸಿದ್ದರು.
85ನೇ ಸಭೆಯಲ್ಲಿ ಈ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಈ ಯೋಜನೆಗೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂಬ ವಿಷಯವೂ ಚರ್ಚೆಗೆ ಬಂದಿದೆ.ಸ್ಥಳ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಬೇಕು ಎಂಬ ಸದಸ್ಯರ ಸಭೆಗೆ ಸಮಿತಿಯ ಅಧ್ಯಕ್ಷರೂ ಆಗಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೆಂದರ್ ಯಾದವ್ ಸಹಮತ ವ್ಯಕ್ತಪಡಿಸಿದರು. ಎಸ್.ಎಸ್.ಸಿಂಗ್, ಆರ್.ಸುಕುಮಾರ್ ಹಾಗೂ ಇಲಾಖೆಯ ನಾಮನಿರ್ದೇಶಿತ ಸದಸ್ಯರ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಸ್ಥಾಯಿ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಯೋಜನೆಗೆ 352.77 ಎಕರೆ ಭೂಮಿ
ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬಳಸುವ ₹9,000 ಸಾವಿರ ಕೋಟಿ ಮೊತ್ತದ ಯೋಜನೆ ಇದು. ಒಟ್ಟು 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ. ಡಿಪಿಆರ್‌ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರವು 2024ರ ಆಗಸ್ಟ್‌ನಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಗೆ 352.77 ಎಕರೆ ಅಗತ್ಯವಿದೆ. ಅದರಲ್ಲಿ 133.81 ಎಕರೆ ಅರಣ್ಯ ಭೂಮಿಯಾಗಿದೆ.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಆಳ -ಅಗಲ
*ಯೋಜನಾ ವೆಚ್ಚ- ಹತ್ತುಸಾವಿರದ ಐನೂರು ಕೋಟಿ ಮೊತ್ತದ ಯೋಜನೆ*
*ಯೋಜನೆಗೆ ಒಳಗೊಂಡ ಜಿಲ್ಲೆ- ಉತ್ತರ ಕನ್ನಡ,ಶಿವಮೊಗ್ಗ ಜಿಲ್ಲೆ*
ಯೋಜನೆಗೆ ಒಳಗೊಂಡ ಪ್ರದೇಶಗಳು- ಅರಣ್ಯ ಭೂಮಿ- 19.982 ಹೆಕ್ಟೇರ್ (ಭೂಮಿಯ ಒಳಗೆ), 34.173 ಹೆಕ್ಟೇರ್ (ಭೂಮಿಯ ಮೇಲೈ) ಒಟ್ಟು ಅರಣ್ಯ ಭೂಮಿ- 54.155 ಹೆಕ್ಟೇರ್ .
ಯೋಜನೆಗೆ ಒಳಗೊಂಡ ಅರಣ್ಯೇತರ ಭೂಮಿ- 0.1 ಹೆಕ್ಟೇರ್ (ಭೂಮಿಯ ಒಳಗೆ) , 88.508 ಹೆಕ್ಟೇರ್ (ಭೂಮಿಯ ಹೊರಗೆ) .ಒಟ್ಟು- 88.608 ಹೆಕ್ಟೇರ್ ಭೂಮಿ.
ಒಟ್ಟು ಭೂಮಿ- 20.082 ಹೆಕ್ಟೇರ್ (ಭೂಮಿಯ ಒಳಗೆ)
122.681 (ಭೂಮಿಯ ಹೊರಗೆ).ಒಟ್ಟು ಭೂಮಿ 142.763 ಹೆಕ್ಟೇರ್
ಜಿಲ್ಲಾ ವಾರು ಭೂ ಸ್ವಾಧೀನಗೊಳ್ಳುವ ಪ್ರದೇಶಗಳು
ಶಿವಮೊಗ್ಗ ಜಿಲ್ಲೆ - ಸಾಗರ ತಾಲೂಕಿನ ತಳಕಳಲೆ ಗ್ರಾಮ - 3.63 ಹೆಕ್ಟೇರ್ - ಸರ್ಕಾರಿ ಶಾಲೆ-1, ಮನೆಗಳು-8,ದನದ ಕೊಟ್ಟಿಗೆ-7
ಉತ್ತರ ಕನ್ನಡ ಜಿಲ್ಲೆ- ಹೊನ್ನಾವರ ತಾಲೂಕಿನ ಗೇರುಸೊಪ್ಪ ,ನಗರಬಸ್ತಿಕೇರಿ,ಬೆಗುಡಿ ಗ್ರಾಮಗಳು.
ಗೇರುಸೊಪ್ಪ ,ನಗರಬಸ್ತಿಕೇರಿ- 0.404 ಹೆಕ್ಟೇರ್ ಭೂ ಭಾಗ- ಮನೆಗಳು-4, ಮಳಿಗೆ-3,ದೇವಾಲಯ ತಡೆಗೋಡೆ-2.
ಬೆಗುಡಿಗ್ರಾಮ- 20.497 ಹೆಕ್ಟೇರ್ - ಸರ್ಕಾರಿ ಅಂಗನವಾಡಿ-01, ಮನೆಗಳು-06,ದನದ ಕೊಟ್ಟಿಗೆ-04,ಬಾವಿ-01, ದೇವಾಲಯ-01.
ಒಟ್ಟು ಎರಡು ಜಿಲ್ಲೆಗಳು ಸೇರಿ -24.31 ಹೆಕ್ಟೇರ್ ಭೂ ಭಾಗ.
ಎಷ್ಟು ಮರಗಳು ಕಟಾವು ಆಗಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗ- 745 ಮರಗಳು
ಶಿವಮೊಗ್ಗ ವನ್ಯಜೀವಿ ವಲಯ - 1518 ಮರಗಳು.
ಉತ್ತರ ಕನ್ನಡ ಹೊನ್ನಾವರ ವಿಭಾಗ- 13756
ಒಟ್ಟು ಮರಗಳ ಕಟಾವು- 16,041 ಮರಗಳು.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯ ಪ್ರಸ್ತುತ ಸ್ಥಿತಿ.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತ ಗೊಳಿಸಲು ಡಿಸೆಂಬರ್ 2023ರಲ್ಲಿ ನೀಡಲಾದ ಹೊಸ TOR ಪ್ರಕಾರ EIA ಅಧ್ಯಯನಗಳು ಪೂರ್ಣ ಗೊಂಡಿವೆ, ಇದರ ವರದಿ ಅಂ ತಿಮ ಗೊಳಿಸಲಾಗಿದೆ.
ಶಿವಮೊಗ್ಗ ದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು 16.09.2025 ರಂದು ಕರೆಯಲಾಗಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲಿ 18.09.2025 ರಂದು ಕರೆಯಲಾಗಿದೆ.
ಪರಿಸರ ಅನುಮತಿ ಯನ್ನು (EC) MoEF & CC ಯಿಂದ ಪಡೆಯ ಬೇಕಾಗಿದ್ದು ಪೆಂಡಿಂಗ್ ಇದೆ.
ಅರಣ್ಯ ಇಲಾಖೆಯಿಂದ 30.07.2025 ರಂದು ನಡೆದ ಅರಣ್ಯ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಪ್ರಥಮ ಹಂತದ (Stage-1) FC ಅನುಮತಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟಿ ಕರಣಗಳನ್ನು ನೀಡುವಂತೆ ಸೂಚಿಸಲಾಗಿದೆ.
26.06.2025 ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾತ್ಕಾಲಿಕ (In-principle) ಅನುಮತಿ ನೀಡಲಾಗಿದೆ.
ಯೋಜನೆಯನ್ನು ಶರಾವತಿ ಕಣಿವೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು , ಯೋಜನೆಯ ಕೆಳಮಟ್ಟದಲ್ಲಿ ಗೇರುಸೊಪ್ಪ ಹಾಗೂ ಮೇಲ್ಪಟ್ಟದಲ್ಲಿ ತಳಕಳಲೆ ಜಲಾಶಯಗಳು ಅಸ್ತಿತ್ವದಲ್ಲಿ ಇದ್ದು , ಎರಡೂ ಜಲಾಶಯವನ್ನು ಏಳು ಕಿಲೋಮೀಟರ್ ಸುರಂಗ ಮಾರ್ಗದ ಮೂಲಕ ಜೋಡಿಸಿ ನೀರು ಹರಿಬಿಟ್ಟು ವಿದ್ಯುತ್ ಉತ್ಪಾದನೆಗೆ ಕಾರ್ಯನಿರ್ವಹಿಸಲಾಗುವುದು.
ಸಧ್ಯ Sharavathi Pump Storage Project ಗೆ ಶಿವಮೊಗ್ಗ ಹಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಜನರು ವಿರೋಧ ವ್ಯಕ್ಯಪಡಿಸಿದ್ದಾರೆ.