Bangaluru ಚರ್ಚ ಸ್ಟ್ರೀಟ್ ಸ್ಫೋಟ ಪ್ರಕರಣ -ಭಟ್ಕಳದಲ್ಲೇ ತಯಾರಾಗಿತ್ತು ಬಾಂಬ್ !
Bangaluru :- ದೇಶದಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಪೋಟಕ ವಸ್ತುಗಳನ್ನು ಪೂರೈಸಿದ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವೈದ್ಯ ಡಾ.ಸೈಯದ್ ಇಸ್ಮಾಯಿಲ್ ಆಫಾಕ್, ಅಬ್ದೂಲ್ ಸುಬೂರ ಹಾಗೂ ಸದ್ದಾಂ ಹುಸೇನ್ ದೋಷಿಗಳೆಂದು NIA ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ಭಟ್ಕಳದ ಜೈಲ್ಲುದ್ದೀನ್ ಹಾಗೂ ರಿಯಾಜ್ ಅಹಮದ್ ಸೈಯದ್ ರನ್ನು ಆರೋಪ ಮುಕ್ತಗೊಳಿಸಿ ಎನ್ಐಎ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು,ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಹೋಮಿಯೋಪತಿ ವೈದ್ಯ ಸೇರಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರನ್ನು ದೋಷಿಗಳೆಂದು ತೀರ್ಪು ನೀಡಲಾಗಿದೆ. 2015ರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಹಾಗೂ ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಐ.ಎಂ ಶಂಕಿತ ಉಗ್ರರನ್ನು ಸೆರೆ ಹಿಡಿದು ಅಪಾರ ಪ್ರಮಾಣ ಸ್ಫೋಟಕ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದರು.
ಮಾಸ್ಟರ್‌ಮೈಂಡ್ ವೈದ್ಯ
2014ರ ಡಿಸೆಂಬರ್ 30ರಂದು ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಸ್ಫೋಟವಾಗಿತ್ತು. ಈ ವಿಧ್ವಂಸಕ ಕೃತ್ಯದ ಹಿಂದೆ ಭಟ್ಕಳದ ನಂಟಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತು.
ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ಪುಲಿಕೇಶಿ ನಗರದಲ್ಲಿ ವೈದ್ಯ ಆಫಾಕ್, ಅಬ್ದುಲ್ ಸುಬೂರ್ ಹಾಗೂ ಭಟ್ಕಳದಲ್ಲಿ ಸದ್ದಾಂ ಹುಸೇನ್ ನನ್ನು ಬಂಧಿಸಲಾಗಿತ್ತು. ಬಳಿಕ ಸಿಸಿಬಿ ತನಿಖೆಯಲ್ಲಿ ದೇಶದ ವಿವಿಧೆಡೆ ಎಂಐ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಪೋಟಕ ವಸ್ತುಗಳನ್ನು ಶಂಕಿತ ಉಗ್ರ ವೈದ್ಯ ಆಫಾಕ್ ತಂಡ ಪೂರೈಸಿದ್ದ ಮಹತ್ವದ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಯುವತಿಯನ್ನು ವಿವಾಹವಾದ ಆಫಾಕ್, ಕೆಲ ತಿಂಗಳ ಬಳಿಕ ಆಕೆ ಜತೆ ಭಟ್ಕಳಕ್ಕೆ ಮರಳಿ ನೆಲೆಸಿದ್ದ. ನಂತರ ಭಟ್ಕಳದಲ್ಲೇ ಜಿಲೆಟಿನ್ ಬಳಸಿ ಬಾಂಬ್‌ಗಳನ್ನು ತಯಾರಿಸಿ ಐಎಂ ಶಂಕಿತ ಉಗ್ರರಿಗೆ ಆಫಾಕ್ ತಂಡ ರವಾನಿಸುತ್ತಿತ್ತು. ಈ ಸ್ಪೋಟಕ ವಸ್ತುಗಳಿಗೆ ಟೈಮರ್ ಫಿಕ್ಸ್ ಮಾಡಿ ಶಂಕಿತ ಉಗ್ರರು ವಿಧ್ವಂಸಕ ಕೃತ್ಯ ನಡೆಸಿದ್ದರು. 2006-14ವರೆಗೆ ಹೈದರಾಬಾದ್, ಪುಣೆ ಹಾಗೂ ದೆಹಲಿ ಸೇರಿ ದೇಶದ ವಿವಿಧೆಡೆ ಐಎಂ ನಡೆಸಿದ್ದ ಬಾಂಬ್ ಸ್ಪೋಟಕ ಕೃತ್ಯಗಳಿಗೆ ಅಫಾಕ್ ತಂಡವೇ ಸ್ಪೋಟಕ ವಸ್ತುಗಳನ್ನು ಪೂರೈಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.