Honnavar:ಹೊನ್ನಾವರದಲ್ಲಿ ರಾಜ್ಯದಲ್ಲೇ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ-ಏನಿದರ ವಿಶೇಷ
Honnavar:ಹೊನ್ನಾವರದಲ್ಲಿ ರಾಜ್ಯದಲ್ಲೇ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ-ಏನಿದರ ವಿಶೇಷ

ಕಾರವಾರ :- ಹೊನ್ನಾವರದ (Honnavar) ಕಾಸರಕೋಡು-ಮುಗಳಿಯಲ್ಲಿ ರಾಜ್ಯದ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ ಮಾಡಲು ಕರ್ನಾಟಕ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯು ಅನುಮೋದನೆ ನೀಡಿದೆ.
ತಮಿಳುನಾಡು,ಗುಜರಾತ್ ಮತ್ತು ಒರಿಸ್ಸಾ ರಾಜ್ಯದಲ್ಲಿ ಈ ರೀತಿಯ ಕಡಲ ವನ್ಯಜೀವಿ ತಾಣವಿದ್ದು ಇದೀಗ ಕರ್ನಾಟಕದ ಕರಾವಳಿಯ ಹೊನ್ನಾವರದಲ್ಲಿ ಸಹ ಕಡಲ ವನ್ಯಜೀವಿ ತಾಣ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.
ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅರಣ್ಯ ಭವನದಲ್ಲಿ ಆಯೋಜನೆಯಾಗಿದ್ದ ವನ್ಯ ಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:-Honnavar: ಪಾಕಿಸ್ತಾನಕ್ಕಿಲ ವೀಳ್ಯದೆಲೆ- ಶಾಶ್ವತ ನಿರ್ಬಂಧ ವಿಧಿಸಿದ ರೈತರು
ಈ ವಿಚಾರ ಇನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಅಂತಿಮಗೊಳ್ಳಬೇಕಿದೆ. ಹಾಗೊಮ್ಮೆ ಅಧಿಸೂಚನೆಯಾದರೆ, ಅದು ರಾಜ್ಯದ ಮೊದಲ ಕಡಲ ವನ್ಯಧಾಮವಾಗಲಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2020 ರ ತಮ್ಮ ಬಜೆಟ್‌ನಲ್ಲಿ ರಾಜ್ಯದ ಮೊದಲ ವನ್ಯಜೀವಿ ಧಾಮ ಮಾಡಲಾಗುವುದು ಎಂದು ಘೋಷಿಸಿ ಅದಕ್ಕೆ 1 ಕೋಟಿ ರೂ. ಮೀಸಲಿಟ್ಟಿದ್ದರು.
ಅರಣ್ಯ ಇಲಾಖೆ ಸಿದ್ದಪಡಿಸಿದ ಪ್ರಸ್ತಾವನೆಗೆ 2021 ರಲ್ಲಿ ಆಗಿನ ವನ್ಯಜೀವಿ ಮಂಡಳಿಯು ಅನುಮೋದನೆ ನೀಡಿತ್ತು. ಕಳೆದ ಜನವರಿಯಲ್ಲಿ ಒಮ್ಮೆ ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ಕಾರಣಾಂತರದಿಂದ ಘೋಷಣೆ ತಡೆಹಿಡಿಯಲ್ಪಟ್ಟಿತ್ತು.
ಈಗ ಮತ್ತೊಮ್ಮ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.
ಎಷ್ಟು ಪ್ರದೇಶ.
ಕಾಸರಕೋಡಿನಿಂದ ಮಂಕಿಯವರೆಗೆ ಸುಮಾರು 7ಕಿಮೀ ವ್ಯಾಪ್ತಿಯ ಪ್ರದೇಶವನ್ನು ಕಡಲ ವನ್ಯಧಾಮ ಎಂದು ಘೋಷಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.
ಅರಬ್ಬಿ ಸಮುದ್ರದಲ್ಲಿ ರಾಜ್ಯದ ವ್ಯಾಪ್ತಿಯ 535.01 ಹೆಕ್ಟೇರ್ ಸೇರಿ ಒಟ್ಟು 5,960 ಹೆಕ್ಟೇರ್ ಪ್ರದೇಶವನ್ನು ಒಳಗೊಳ್ಳಲಿದೆ. ನಂತರ ಕಡಲ ತೀರದಿಂದ ಆರು ಕಿಲೋಮೀಟರ್ ವರೆಗೂ ಅರಬ್ಬಿ ಸಮುದ್ರದಲ್ಲಿ ಈ ವನ್ಯಧಾಮದ ವ್ಯಾಪ್ತಿ ವಿಸ್ತಾರಗೊಳ್ಳಲಿದೆ. ಒಟ್ಟಾರೆ ಪ್ರದೇಶದಲ್ಲಿ 535.302 ಹೆಕ್ಟೇರ್‌ನಷ್ಟು ಕೆಂಪುಗಲ್ಲು (ಲ್ಯಾಟರೈಟ್) ಗುಡ್ಡ , ೫,೪೦೦ ಹೆಕ್ಟೇರ್ ಕಾಂಡ್ಲಾ ವನ ಕೂಡ ಸೇರಿದೆ.
ಏನಿದರ ವಿಶೇಷ ...?
ಇಂಡೋ-ಫೆಸಿಪಿಕ್ ಹಂಪ್ ಬ್ಯಾಕ್ ತಿಮಿಂಗಿಲಗಳು, ಸ್ಪಾಟ್ ಟೈಲ್ ಶಾರ್ಕ್, ಆಲಿವ್ ರೆಡ್ಲಿ ಆಮೆಗಳು ಮುಂತಾದ ಅಳಿವಿನಂಚಿನಲ್ಲಿರುವ ಕಡಲ ಜೀವಿಗಳು ಇಲ್ಲಿವೆ. 80 ಪ್ರಭೇದದ ಕಡಲ ಹಕ್ಕಿಗಳು, 14 ಪ್ರಭೇದದ ಹವಳದ ದಂಡೆಗಳು, 100 ಕ್ಕೂ ಅಧಿಕ ಪ್ರಭೇದದ ಸಮುದ್ರ ಕಳೆಗಳು, ಎರಡು ಪ್ರಭೇದದ ಸಮುದ್ರ ಸೀಗ್ರಾಸ್, 100 ಝೂಪ್ಲಾಕ್ಟನ್ ಪ್ರಭೇದಗಳು, 50 ಪೈಟೋ ಪ್ಲಾಕ್ಟನ್ ಪ್ರಭೇದ ಸೇರಿ. ಸಾಗರ ಜೀವ ಸಂಕುಲದಿಂದ ಶ್ರೀಮಂತವಾದ ಪ್ರದೇಶ ಇದಾಗಿದೆ. ಇದೇ ವ್ಯಾಪ್ತಿಯಲ್ಲಿ ಶ್ರೇಷ್ಠ ಬ್ಲೂ ಫ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಕೂಡ ಇದೆ.