India| ನಾಲ್ಕು ವರ್ಷದ ನಂತರ ಚೀನಾಕ್ಕೆ ನೇರ ವಿಮಾನ ಹಾರಾಟಕ್ಕೆ ಸಮ್ಮತಿ
India| ನಾಲ್ಕು ವರ್ಷದ ನಂತರ ಚೀನಾಕ್ಕೆ ನೇರ ವಿಮಾನ ಹಾರಾಟಕ್ಕೆ ಸಮ್ಮತಿ
ನವದೆಹಲಿ:ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸಂಚಾರವನ್ನು ಈ ತಿಂಗಳ ಅಂತ್ಯದೊಳಗೆ ಪುನರಾರಂಭಿಸಲು ಭಾರತ ಮತ್ತು ಚೀನಾ(china) ಸರ್ಕಾರ ಒಪ್ಪಂದ ಮಾಡಿಕೊಂಡಿವೆ.
ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ದೀರ್ಘ ಚರ್ಚೆಗಳ ನಂತರ ಈ ಒಪ್ಪಂದಕ್ಕೆ ಬಂದಿರುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಮಾತೂಕತೆ ಮೂಲಕ ಪಲಪ್ರದವಾಗಿದೆ.
ಸಚಿವಾಲಯದ ಪ್ರಕಟಣೆಯ ಪ್ರಕಾರ, ಈ ವರ್ಷದ ಆರಂಭದಿಂದಲೂ ಎರಡೂ ದೇಶಗಳ ವಿಮಾನಯಾನ ಅಧಿಕಾರಿಗಳ ನಡುವಿನ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯುತ್ತಲೇ ಇತ್ತು .ವಿಮಾನ ಯಾನವನ್ನು ಪುನಹಾ ಪ್ರಾರಂಭಿಸಲು ಪರಿಷ್ಕೃತ ಏರ್ ಸರ್ವಿಸ್ ಒಪ್ಪಂದವನ್ನು ಅಂತಿಮಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು.
ಹೊಸ ಒಪ್ಪಂದದಡಿ, ಭಾರತ ಮತ್ತು ಚೀನಾದ ನಿಯೋಜಿತ ವಿಮಾನಯಾನ ಸಂಸ್ಥೆಗಳಿಗೆ ಪರಸ್ಪರ ಒಪ್ಪಿಗೆಯ ನಗರಗಳ ನಡುವೆ ನೇರ ವಿಮಾನಗಳನ್ನು ಸಂಚರಿಸಲು ಅನುಮತಿ ನೀಡಲಾಗುತ್ತದೆ. ಇದರ ಅನುಷ್ಠಾನವು ಚಳಿಗಾಲದ ವೇಳಾಪಟ್ಟಿಯಿಂದ ಆರಂಭವಾಗಲಿದ್ದು, ಎಲ್ಲಾ ಕಾರ್ಯಾಚರಣಾತ್ಮಕ ಮತ್ತು ವಾಣಿಜ್ಯ ನಿಯಮಗಳು ಪೂರ್ತಿಯಾಗಬೇಕಿದೆ.
ಇಂಡಿಗೋ ಏರ್ ಲೈನ್ಸ್ ತನ್ನ ಚೀನಾ ಸೇವೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದೆ. ಇಂಡಿಗೋ ಅಕ್ಟೋಬರ್ 26, 2025ರಿಂದ ಪ್ರತಿದಿನ ಕೋಲ್ಕತ್ತಾ–ಗ್ವಾಂಗ್‌ಝೌ ನಡುವೆ ನೇರ ವಿಮಾನ ಸಂಚಾರ ಆರಂಭಿಸುತ್ತಿದೆ. ನಿಯಂತ್ರಣ ಅನುಮೋದನೆ ಸಿಕ್ಕ ನಂತರ ದೆಹಲಿ–ಗ್ವಾಂಗ್‌ಝೌ ನಡುವೆ ಸಹ ನೇರ ವಿಮಾನ ಸೇವೆ ಆರಂಭಿಸಲು ಯೋಜಿಸಲಾಗಿದೆ.
ಇಂಡಿಗೋ ಈ ಸೇವೆಗಳಿಗೆ ಏರ್‌ಬಸ್ A320neo ವಿಮಾನಗಳನ್ನು ಬಳಸಲಿದ್ದು, ಇದು ದ್ವಿಪಕ್ಷೀಯ ವ್ಯಾಪಾರ, ವ್ಯವಹಾರಿಕ ಸಹಭಾಗಿತ್ವ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಅವಕಾಶ ತೆರೆಯಲಿದೆ ಎಂದು ಕಂಪನಿ ತಿಳಿಸಿದೆ.
ಚೀನಾ ಗೆ ನಾಲ್ಕು ವರ್ಷದಿಂದ ನೇರ ಹಾರಾಟ ಬಂದ್!
ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ನಂತರದ ಭಾರತ–ಚೀನಾ ಗಡಿ ಉದ್ವಿಗ್ನತೆಯ ನಂತರ ಕುಂಠಿತಗೊಂಡಿದ್ದ ಎರಡು ದೇಶದ ಸಂಪರ್ಕಗಳನ್ನು ಈ ಕ್ರಮ ಪುನರುಜ್ಜೀವಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
India news: GST slab ನಲ್ಲಿ ಪರಿಷ್ಕರಣೆ| ಯಾವ ವಸ್ತು ಇಳಿಕೆ,ಏರಿಕೆ ವಿವರ ಇಲ್ಲಿದೆ.
ಎರಡು ಏಷ್ಯನ್ ರಾಷ್ಟ್ರಗಳ ನಡುವೆ ನೇರ ವಿಮಾನ ಸೇವೆ ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಗಿತಗೊಂಡಿತ್ತು, ಇದರಿಂದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ವಿನಿಮಯಗಳು ಅಸ್ತವ್ಯಸ್ತಗೊಂಡಿದ್ದವು.
ಈ ಘೋಷಣೆ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಸುಧಾರಣೆ ತರುವಲ್ಲಿ ಮಹತ್ವದ ಬೆಳವಣಿಗೆ ಸೂಚಿಸುತ್ತಿದ್ದು, ಅಮೆರಿಕಾ–ಭಾರತ ವ್ಯಾಪಾರ ಚರ್ಚೆಗಳ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ 50 ಶೇಕಡಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತ-ಚೀನಾ ಸಂಬಂಧ ಗಟ್ಡಿಯಾಗುವತ್ತ ದಾಪುಗಾಲಿಟ್ಟಿದೆ.
ಸಂಬಂಧಗಳನ್ನು ಸ್ಥಿರಗೊಳಿಸಲು ಎರಡೂ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಭಾಗವಾಗಿ ಈ ವಿಮಾನ ಸಂಚಾರ ಪುನರಾರಂಭದ ನಿರ್ಧಾರವಾಗಿದ್ದು, ಇದು ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಪುನರುಜ್ಜೀವಗೊಳಿಸಲು ಸಹಾಯ ಮಾಡಲಿದೆ.
ವಿಶ್ಲೇಷಕರು ಈ ಬೆಳವಣಿಗೆಯನ್ನು ಪ್ರಾಯೋಗಿಕ ಹೆಜ್ಜೆ ಎಂದು ಪರಿಗಣಿಸುತ್ತಿದ್ದು, ಇದು ಭವಿಷ್ಯದಲ್ಲಿ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸಲು ದಾರಿ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.