Karnataka|ಬೇಲಿಕೇರಿ ಅದಿರಿ ನಾಪತ್ತೆ ಪ್ರಕರಣ | ಸಚಿವ ಸಂಪುಟ ಉಪ ಸಮಿತಿ ವರದಿ ಅಂಗೀಕಾರ-ನಿವೃತ್ತ ಅಧಿಕಾರಿಗಳಿಗೂ ತನಿಖೆ!
ಬೇಲಿಕೇರಿ ಅದಿರಿ ನಾಪತ್ತೆ ಪ್ರಕರಣ | ಸಚಿವ ಸಂಪುಟ ಉಪ ಸಮಿತಿ ವರದಿ ಅಂಗೀಕಾರ-ನಿವೃತ್ತ ಅಧಿಕಾರಿಗಳಿಗೂ ತನಿಖೆ!
ಕಾರವಾರ: ರಾಜ್ಯದಲ್ಲೇ ಸದ್ದು ಮಾಡಿದ್ದ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಬಂದ ಬೆನ್ನಲ್ಲೇ ಅಕ್ರಮ ಗಣಿಗಾರಿಕೆ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ಸಚಿವ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನು ಕ್ಯಾಬಿನೇಟ್ ಅಂಗೀಕರಿಸಿದೆ.
ಜನಪ್ರತಿನಿಧಿ ನ್ಯಾಯಾಲಯದಲ್ಲಿ ಗಣಿ ಧೂಳಿನ ಕಳಂಕ ತೊಳೆದುಕೊಂಡು ನಾವು ಶುದ್ದವಾಗಿದ್ದೇವೆ ಎಂದು ಉಸಿರು ಬಿಟ್ಟಿದ್ದ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳಿಗೆ ಇದೀಗ ಮತ್ತೆ ತನಿಖೆ ಎದುರಿಸಲು ಸಿದ್ದವಾಗಬೇಕಿದೆ.
14 ವರ್ಷಗಳಿಂದ ಧೂಳು ಹಿಡಿದ ಲೋಕಾಯುಕ್ತ ಫೈಲ್ ಗಳು ಹೊರಬಂದರೇ ಬಳ್ಳಾರಿ, ಹೊಸಪೇಟೆ, ಕಾರವಾರ, ಬೆಂಗಳೂರು ಸೇರಿ ವಿವಿಧೆಡೆ ಇರುವ ಹಲವು ಅಧಿಕಾರಿಗಳು ಮತ್ತು ನಿವೃತ್ತರಿಗೆ ಕಂಠಕ ಎದುರಾಗುವುದು ಖಚಿತವಾಗಿದೆ.
ಇದನ್ನೂ ಓದಿ:-ED Raide: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೆಷ್ಟು?
2000 ದಿಂದ 2010 ರವರೆಗೆ ನಡೆದ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ 2011 ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ 730 ಅಕಾರಿಗಳು ಲಂಚ ಪಡೆದ ಬಗ್ಗೆ ಪ್ರಸ್ತಾಪವಿತ್ತು. ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಬಂದರು ಹೀಗೆ ವಿವಿಧ ಇಲಾಖೆಗಳ ಹಿರಿಯ ಐಎಎಸ್ ಅಕಾರಿಗಳಿಂದ ಹಿಡಿದು ಸಾಮಾನ್ಯ ಸಿಬ್ಬಂದಿಯವರೆ ಹಲವರ ಹೆಸರು ಉಲ್ಲೇಖಿಸಲಾಗಿತ್ತು.
ಇದಲ್ಲದೇ ಅವರಿಗೆ ಮಾಸಿಕ ಎಷ್ಟು ಲಂಚ ನೀಡಲಾಗುತ್ತಿತ್ತು ಎಂಬುದನ್ನೂ ವರದಿ ಹೇಳಿತ್ತು. ಕಾರವಾರ ಬಂದರು ನಿರ್ದೇಶಕರು, ಬಂದರು ಅಧಿಕಾರಿ, ಬಂದರು ಸಂರಕ್ಷಣಾಧಿಕಾರಿ, ಸಾಮಾನ್ಯ ಬಂದರು ಕಾವಲು ಸಿಬ್ಬಂದಿ ಸೇರಿ 24 ಅಧಿಕಾರಿಗಳ ಮೇಲೆ ಲಂಚದ ಆರೋಪಗಳಿದ್ದವು.
ಅದಿರು ತುಂಬಿದ ಪ್ರತಿ ಹಡಗು ಕಾರವಾರದಿಂದ ಬಿಡಲು ನಿರ್ದೇಶಕರಿಗೆ 50 ಸಾವಿರ ರೂ. ನೀಡಬೇಕು. ಬಂದರು ಅಧಿಕಾರಿಗೆ 25 ಸಾವಿರ ರೂ. ನೀಡಬೇಕು. ಉಪ ಸಂರಕ್ಷಣಾಧಿಕಾರಿಗೆ 5 ಸಾವಿರ ರೂ. ಬಂದರು ಸಿಬ್ಬಂದಿಗೆ 5,500, ಕಸ್ಟಮ್ಸ್ ಎಸಿಗೆ ಪ್ರತಿ ಮೂರು ತಿಂಗಳಿಗೆ 1 ಲಕ್ಷ ರೂ. ಎಸ್‌ಪಿಗೆ ಪ್ರತಿ 2 ತಿಂಗಳಿಗೆ 1 ಲಕ್ಷ ರೂ. ಎಎಸ್‌ಪಿಗೆ ಮಾಸಿಕ 25 ಸಾವಿರ ರೂ. ಡಿವೈಎಸ್‌ಪಿಗೆ ಮಾಸಿಕ 10 ಸಾವಿರ ರೂ. ಸಿಪಿಐಗೆ 14 ಸಾವಿರ ರೂ. ಪೊಲೀಸ್ ಔಟ್ ಪೋಸ್ಟ್ 5 ಸಾವಿರ ರೂ. ನೀಡಲಾಗುತ್ತಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಗಣಿ ಕಂಪನಿಗಳ ಕಂಪ್ಯೂಟರ್‌ಗಳಲ್ಲಿ ಲಭ್ಯವಾಗಿರುವ ದಾಖಲೆ ಆಧರಿಸಿ ಲೋಕಾಯುಕ್ತ ವರದಿ ಮಾಡಿತ್ತು.
ಲಂದದ ಆರೋಪ ಹೊತ್ತ ಅಧಿಕಾರಿಗಳ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಲೋಕಾಯುಕ್ತ ಶಿಫಾರಸು ಮಾಡಿತ್ತು. ಆದರೆ, ಶಿಫಾರಸುಗಳು ಜಾರಿಯಾಗಿರಲಿಲ್ಲ. ಪ್ರಭಾವ ಬಳಸಿದ್ದ ಹಲವು ಅಧಿಕಾರಿಗಳು ಒಬ್ಬೊಬ್ಬರಾಗಿ ಪ್ರಕರಣದಿಂದ ನುಣುಚಿಕೊಂಡಿದ್ದರು. 24 ಅಧಿಕಾರಿಗಳ ಮೇಲೆ ಇರುವ ಆರೋಪ ಸಾಬೀತಾಗಿಲ್ಲ ಎಂದು ಅವರನ್ನು ಈ ಹಿಂದೆ ರಾಜ್ಯ ಸರ್ಕಾರವೇ ರಚಿಸಿದ್ದ ಎಸ್‌ಐಟಿ ಈ ಹಿಂದೆ ನ್ಯಾಯಾಲಯಕ್ಕೆ ವರದಿ ನೀಡಿತ್ತು.
ಈಗ ಎಸ್‌ಐಟಿ ನೀಡಿದ್ದ ವರದಿಯನ್ನು ಮರು ಪರಿಶೀಲನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ ಅನುಮತಿ ದೊರೆಯದ 9 ಬಿ ವರದಿಯನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ. ವರದಿಯಲ್ಲಿದ್ದ ಹಲವು ಅಧಿಕಾರಿಗಳು ಸೇವೆಯಿಂದ ನಿವೃತ್ತರಾಗಿದ್ದಾರೆ.ಆದರೂ ಅವರೆಲ್ಲರಿಗೂ ಕಂಠಕ ಎದುರಾಗುವ ಸಾಧ್ಯತೆ ಇದ್ದು ತನಿಖೆ ಎದುರಿಸಬೇಕಿದೆ.
ಕಾಂಗ್ರೆಸ್ ನಾಯಕರಿಗೂ ಕಂಠಕ..?
ಅಕ್ರಮ ಅದಿರು ಸಾಗಣೆ ಸಂಬಂಧ ಲೋಕಾಯುಕ್ತ ಮೊದಲು ತನಿಖೆ ನಡೆಸಿತ್ತು. ನಂತರ ಸಿಐಡಿ, ಸಿಬಿಐ, ಎಸ್‌ಐಟಿ ಸೇರಿ ವಿವಿಧ ತನಿಖಾ ಸಂಸ್ಥೆಗಳು ಗಣಿ ಧಣಿಗಳ, ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿತ್ತು.
ಆದರೆ ಇದುವರೆಗೆ ಬೆರಳೆಣಿಕೆಯ ಮಂದಿಗೆ ಮಾತ್ರ ಶಿಕ್ಷೆಯಾಗಿದೆ.ಸಿಬಿಐ ಒಟ್ಟು 9 ಪ್ರತ್ಯೇಕ ಚಾರ್ಜ್ ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಂತೆ ಸದ್ಯ ಇದುವರೆಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಕಾರವಾರ ಶಾಸಕ ಸತೀಶ ಸೈಲ್, ಬೇಲೆಕೇರಿ ಬಂದರು ಸಂರಕ್ಷಣಾಕಾರಿ ಮಹೇಶ ಬಿಲಿಯೆ ಹಾಗೂ ಬಳ್ಳಾರಿ ಮೂಲದ ಕೆಲವು ಉದ್ಯಮಿಗಳಿಗೆ ಮಾತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.
ಕಾರವಾರ ಶಾಸಕ ಸೈಲ್ ಸೇರಿ ಇತರರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಆದರೆ, ಸೈಲ್‌ಗೆ ಈಗ ಸಿಬಿಐ, ಇಡಿ ಜೊತೆ ಅವರದ್ದೇ ಸರ್ಕಾರದ ಎಸ್‌ಐಟಿಯಿಂದಲೂ ತನಿಖೆ ಶುರುವಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ಕಾಂಗ್ರೆಸ್ ನಾಯಕ ವಿವೇಕ ಹೆಬ್ಬಾರ ಅವರ ಹೆಸರೂ ಕೂಡ ಸಿಬಿಐ ಸೇರಿ ಇತರ ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿದ್ದು, ಅವರಿಗೂ ಮತ್ತೆ ಕಂಠಕ ಎದುರಾಗುವ ಸಾಧ್ಯತೆಗಳಿವೆ.
ಸದ್ಯ ಕಾರವಾರದ ಶಾಸಕ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿ ಹಲವು ದಾಖಲೆಗಳು,ಹಣ,ಚಿನ್ನವನ್ನು ವಶಪಡಿಸಿಕೊಂಡಿದೆ. ಇದಲ್ಲದೇ ಬಳ್ಳಾರಿಯ ಗಣಿ ದಣಿಗಳಿಗೂ ಬಿಸಿ ಮುಟ್ಟಿಸಿದ್ದು ,ಇದೀಗ ಜನಪ್ರತಿನಿಧಿಗಳ ಜೊತೆ ಸರ್ಕಾರಿ ಅಧಿಕಾರಿಗಳು ಸಹ ತನಿಖೆ ಎದುರಿಸಬೇಕಿದೆ.
ಹಿಂದೆ ಏನೇನಾಗಿತ್ತು..?
2010 ರ ಮಾರ್ಚ್ 20 ರಂದು ಕಾರವಾರ ಬೇಲೆಕೇರಿ ಬಂದರುಗಳಲ್ಲಿ ಅಕ್ರಮವಾಗಿ ತೆಗೆದ 8.05 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು.
2010 ರ ಜೂನ್ ನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಬಂದರು ಇಲಾಖೆಯ ಸುಪರ್ದಿಯಲ್ಲಿ ಇಟ್ಟಿದ್ದ 5 ಲಕ್ಷ ಮೆಟ್ರಿಕ್‌ಟನ್ ಅದಿರನ್ನು ಕಳ್ಳತನ ಮಾಡಿದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ನಂತರ ಸಿಐಡಿ ಈ ಸಂಭಂಧ ತನಿಖೆ ನಡೆಸಿತ್ತು. ಇದಾದ ಬಳಿಕ 2012 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆ ಆರಂಭಿಸಿತ್ತು. ಕಾರವಾರ ಶಾಸಕ ಸತೀಶ ಸೈಲ್ ಸೇರಿ ಹಲವು ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಿತ್ತು.
2013 ರಲ್ಲಿ ಮೊದಲ ಚಾರ್ಜ್ ಶೀಟ್ ಸಲ್ಲಿಸಿದ್ದ ಸಿಬಿಐ 2019 ರವರೆಗೂ ವಿವಿಧ ಹಂತಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.2024 ರ ಅಕ್ಟೋಬರ್‌ನಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಹಾಗೂ ಇತರರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಯಲಯದಿಂದ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿತ್ತು. ಇದಾದ ನಂತರ ಮಧ್ಯಂತರ ತಡೆಯಾಜ್ಞೆ ತಂದಿದ್ದು ಈಗಲೂ ತನಿಖೆ ನಡೆಯುತ್ತಿದೆ.