Online fraud| ಆನ್ ಲೈನ್ ನಲ್ಲಿ ಹಣಗಳಿಸುವ ಆಸೆ 10 ಲಕ್ಷ ಕಳೆದುಕೊಂಡ ಮಹಿಳೆ!
Online fraud| ಆನ್ ಲೈನ್ ನಲ್ಲಿ ಹಣಗಳಿಸುವ ಆಸೆ 10 ಲಕ್ಷ ಕಳೆದುಕೊಂಡ ಮಹಿಳೆ!
ಕಾರವಾರ: ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ದಿನಕ್ಕೆ ಸಾವಿರಾರು ರೂಪಾಯಿ ಗಳಿಸಬಹುದು ಎಂಬ ಆಸೆಗೆ ಬಿದ್ದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು, ಬರೋಬ್ಬರಿ 10.98 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದ್ದು ಮಹಿಳೆ ಈ ಕುರಿತು ಕಾರವಾರದ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಏನು?
ದಿನಾಂಕ 04-11-2025 ರಂದು ಮಹಿಳೆಗೆ ಟೆಲಿಗ್ರಾಮ್ ಆ್ಯಪ್‌ನಲ್ಲಿ "Mishika" ಎಂಬ ಹೆಸರಿನ ಐಡಿಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ "ಆನ್‌ಲೈನ್ ಪಾರ್ಟ್ ಟೈಂ ಜಾಬ್ ಇದೆ, ಮನೆಯಲ್ಲೇ ಕುಳಿತು ಪ್ರತಿದಿನ 3,000 ರೂ. ಗಳವರೆಗೆ ಆದಾಯ ಗಳಿಸಬಹುದು" ಎಂದು ನಂಬಿಸಲಾಗಿತ್ತು.
ಇದನ್ನು ನಂಬಿ ಆಸಕ್ತಿ ತೋರಿದಾಗ, ವಂಚಕರು ವಾಟ್ಸಾಪ್ ಮೂಲಕ ಸಂಪರ್ಕಿಸಿ , ಒಂದು ಲಿಂಕ್ ಕಳುಹಿಸಿ 'Rent' ಎಂಬ ವೆಬ್‌ಸೈಟ್‌ಗೆ ಲಾಗಿನ್ ಆಗುವಂತೆ ಸೂಚಿಸಿದ್ದರು. ಅಲ್ಲಿ ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಮತ್ತು ರಿವ್ಯೂ ನೀಡುವ ಕೆಲಸ ನೀಡಲಾಗಿತ್ತು.
ನಂಬಿಸಲು ಲಾಭದ ಆಮಿಷ!
ಆರಂಭದಲ್ಲಿ ಮಹಿಳೆ 10,000 ರೂ. ಹೂಡಿಕೆ ಮಾಡಿದಾಗ, ವಂಚಕರು ವಿಶ್ವಾಸಗಳಿಸಲು ಲಾಭಾಂಶ ಸೇರಿ 15,268 ರೂ.ಗಳನ್ನು ವಾಪಸ್ ನೀಡಿದ್ದರು. ಇದರಿಂದ ಉತ್ತೇಜಿತರಾದ ಅವರಿಗೆ, ಹೆಚ್ಚಿನ ಲಾಭಕ್ಕಾಗಿ ಇನ್ನೂ ಹೆಚ್ಚು ಹಣ ಹೂಡಿಕೆ ಮಾಡಲು ಆರೋಪಿತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಿಳೆಯು, ಪ್ರಕರಣದ ಇತರ ಇಬ್ಬರು ವ್ಯಕ್ತಿಗಳ ಪ್ರಚೋದನೆಯ ಮೇರೆಗೆ ಹಾಗೂ ಅವರ ಆರ್ಥಿಕ ಸಹಾಯದೊಂದಿಗೆ ಹಂತ ಹಂತವಾಗಿ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10,98,113 ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶವಾಗಲಿ ಅಥವಾ ಅಸಲು ಹಣವಾಗಲಿ ಬಾರದೇ ಇದ್ದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಈ ಸಂಬಂಧ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಮೊಬೈಲ್ ಬಳಕೆದಾರ ಹಾಗೂ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.