Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ (gokarna) ಕುಡ್ಲೆ ಕಡಲ ತೀರದ ಬಳಿ ನೀಲಿ ಬೆಳಕಿನ ವಿಸ್ಮಯ ಮೂಡಿದೆ. ರಾತ್ರಿ ವೇಳೆ ಕಡಲ ಅಲೆಗಳು ನೀಲಿಯಾಗಿ ಬೆಳಕಿನಂತೆ ಹೊಳೆಯುತಿದ್ದು ಸಮುದ್ರದಲ್ಲಿ ಕತ್ತಲಲ್ಲೂ ಬೆಳಕು ಸೂಸುತ್ತಿದೆ.
ಹೌದು ಈ ವಿಸ್ಮಯ ಕಳೆದ ಎರಡು ದಿನದಿಂದ ಈ ಭಾಗಗಳಲ್ಲಿ ಗೋಚರಿಸುತ್ತಿದೆ. ಹಾಗಂತ ಈ ರೀತಿಯ ವಿಸ್ಮಯ ಬೆಳಕು ಇದೇ ಮೊದಲಲ್ಲ.
Gokarna:ಅಹಮದಾಬಾದ್ ವಿಮಾನ ದುರಂತ -ಗೋಕರ್ಣದಲ್ಲಿ ಮೃತ 260 ಕ್ಕೂ ಹೆಚ್ಚು ಜನರ ಪಿತ್ರುಕಾರ್ಯ
ಕಾರವಾರದ ತಿಳಮಾತಿ ಬೀಚಿನಿಂದ ಹಿಡಿದು ರಮೀಂದ್ರನಾಥ ಟಾಗೂರ್ ಕಡಲ ತೀರದ ವರೆಗೆ ನವಂಬರ್ 2020 ರಲ್ಲಿ ಇದೇ ಮಾದರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಿತ್ತು. ತೀರ ಪ್ರದೇಶದಲ್ಲಿ ಕಾಲಿಟ್ಟರೇ ಬೆಳಕಿನ ಹೆಜ್ಜೆ ಮೂಡುತಿತ್ತು.

ಇದಕ್ಕೂ ಮೊದಲು 2017 ರಲ್ಲಿಯೂ ಕಾರವಾರ,ಗೋಕರ್ಣ ಕಡಲ ತೀರದಲ್ಲಿ ಕಾಣಿಸಿತ್ತು. ಆದರೇ ಇದೀಗ ಮತ್ತೆ ಈ ಬೆಳಕು ಗೋಕರ್ಣದ ಕಡಲ ಭಾಗದಲ್ಲಿ ಕಾಣಿಸುತ್ತಿದೆ.
ನೀಲಿ ಬೆಳಕಿನ ವಿಸ್ಮಯಕ್ಕೆ ವೈಜ್ಞಾನಿಕ ಕಾರಣವೇನು?
ವೈಜ್ಞಾನಿಕವಾಗಿ ‘ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್’ (Dinoflagellate Noctiluca scintillans) ಎಂಬ ಸೂಕ್ಷ್ಮಜೀವಿಗಳು ದೇಹದಿಂದ ರಾಸಾಯನಿಕವನ್ನು ಸ್ರವಿಸಿದಾಗಿ ನೀಲಿ ಬಣ್ಣದ ಬೆಳಕು ಮೂಡುತ್ತದೆ. ಮಿಂಚುಹುಳುವಿನ ಮಾದರಿಯಲ್ಲಿ ಹೊಳೆಯುತ್ತವೆ. ಒಂದೇ ಜೀವಕೋಶ ಹೊಂದಿರುವ ಈ ಸೂಕ್ಷ್ಮಜೀವಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದಾಗ ಇಂತಹ ವಿದ್ಯಮಾನ ಗೋಚರಿಸುತ್ತದೆ ಎಂದು ವಿಜ್ಞಾನ ಜಗತ್ತು ಹೇಳುತ್ತದೆ.

ಈ ಕುರಿತು ಮಾಹಿತಿ ನೀಡಿದ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ, 2019 ರಲ್ಲಿ ಭಟ್ಕಳದವರೆಗೂ ಕಡಲತೀರದಲ್ಲಿ ಕಾಣಿಸಿಕೊಂಡಿದ್ದವು.ಸಮುದ್ರದಲ್ಲಿ ಅವುಗಳಿಗೆ ಪೂರಕವಾದ ವಾತಾವರಣ ಕಂಡುಬಂದಾಗ ಹುಲುಸಾಗಿ ಬೆಳೆಯುತ್ತವೆ ಎಂದರು.
ನದಿಯಲ್ಲಿರುವ ಪೋಷಕಾಂಶಗಳು ಮಳೆಗಾಲದಲ್ಲಿ ಸಮುದ್ರಕ್ಕೆ ಸೇರುತ್ತವೆ. ಜೊತೆಗೆ ಅದೆಷ್ಟೋ ಚರಂಡಿಗಳ ನೀರು ಕೂಡ ಸಮುದ್ರದಲ್ಲಿ ವಿಲೀನವಾಗುತ್ತದೆ. ಇದರಿಂದ ಆಲ್ಗೆಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸಿಗುತ್ತದೆ. ಜೊತೆಗೆ ಬಿಸಿಲು ಕೂಡ ಇರುವುದು ಅವುಗಳಿಗೆ ಅನುಕೂಲಕರ ವಾತಾವರಣ ಉಂಟುಮಾಡುತ್ತದೆ. ಸಮುದ್ರದಾಳದಲ್ಲಿ ಹೂಳೆತ್ತುವಂಥ ಕಾರ್ಯಗಳ ಮೂಲಕ ಮನುಷ್ಯನ ಹಸ್ತಕ್ಷೇಪ ಹೆಚ್ಚಾಗುವುದೂ ಇದಕ್ಕೆ ಕಾರಣಗಳಲ್ಲಿ ಒಂದು ಎಂದು ಅವರು ವಿವರಿಸಿದರು
ಕೆಲವು ವರ್ಷಗಳ ಹಿಂದಿನವರೆಗೆ ಬಾಂಗ್ಡೆ, ತಾರ್ಲಿ ಮೀನುಗಳು ಹೆಚ್ಚಿರುತ್ತಿದ್ದವು. ಅವುಗಳು ಆಲ್ಗೆಗಳನ್ನು ತಿನ್ನುತ್ತಿದ್ದ ಕಾರಣ ನಿಯಂತ್ರಣದಲ್ಲಿ ಇರುತ್ತಿದ್ದವು. ಆದರೆ ಈಚೆಗೆ ಈ ಮೀನುಗಳ ಸಂತತಿ ಕಡಿಮೆಯಾಗಿದೆ. ಈ ಪ್ರಭೇದದ ಆಲ್ಗೆಯೊಂದೇ ಸಮುದ್ರದಲ್ಲಿ ಬೆಳೆಯುತ್ತಿದ್ದು, ಇತರ ಜಾತಿಯವು ಹೆಚ್ಚಾಗಲು ಅವಕಾಶವಿಲ್ಲದಂತಾಗಿದೆ. ಇದು ಒಂದು ರೀತಿಯಲ್ಲಿ ಮೀನುಗಳಿಗೆ ಆಹಾರದ ಕೊರತೆಯಾಗಲೂ ಕಾರಣವಾಗಿದೆ. ಹೀಗಾಗಿ ಮೀನುಗಳು ಸೊರಗಿ ಮೀನುಗಾರಿಕೆಯೂ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಅಪಾಯ ಏನು?

ಇವುಗಳ ಸಂತತಿ ಹೆಚ್ಚಾದರೇ ಮೀನುಗಳ ವೃದ್ಧಿಗೆ ಕಂಟಕವಾಗಿದೆ. ಮೀನುಗಳ ಆಹಾರ ಸರಪಳಿಯ ಕೊಂಡಿ ಕಡಿದು ಹೋಗುತ್ತದೆ. ಈ ಜೀವಿಗಳು ಎಷ್ಟು ಅಪಾಯ ಎಂದರೇ ಇವುಗಳು ವಿಷಯುಕ್ತವಾಗಿದ್ದು ,ಮನುಷ್ಯನಿಗೂ ಹಾನಿಕಾರಕವಾಗಿದೆ. ವಾತಾವರಣ ಬದಲಾಗಿ ಮಳೆ ,ಬಿಸಿಲು ಹೆಚ್ಚು ಆದಾಗ ಇವುಗಳ ಸಂತತಿ ವೃದ್ದಿಸುತ್ತದೆ. ಇವು ಹೆಚ್ಚು ಬೆಳೆದಾಗ ಅಮೋನಿಯ ರಿಲೀಸ್ ಮಾಡುತ್ತದೆ.ಹೀಗಾಗಿ ಇವು ಅಪಾಯಕಾರಿಯಾಗಿವೆ.
ಇವು ತಾವಾಗಿಯೇ ಚಲಿಸುವುದಿಲ್ಲ,ಗಾಳಿ ಹಾಗೂ ಅಲೆಗಳ ಸಹಾಯದಲ್ಲಿ ಅಲೆಗಳು ಎಲ್ಲಿ ಚಲಿಸುತ್ತವೆಯೋ ಅಲ್ಲಿ ಚಲಿಸುತ್ತವೆ. ಇವು ಇರುವಲ್ಲಿ ಮೀನುಗಳು ಸಹ ಬರುವುದಿಲ್ಲ.
ನೀಲಿ ಬೆಳಕು ಸೂಸುವ ಪಾಚಿ ಮಾದರಿಯ ಅಧ್ಯಯನ
ಬೆಳಕು ಸೂಸುವ ಆಲ್ಗೆಗಳು 1949ರಲ್ಲಿ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಕಾಣಿಸಿಕೊಂಡವು. ಕಾರವಾರದಲ್ಲಿ 2017ರಲ್ಲಿ ಮೊದಲ ಬಾರಿಗೆ ದಾಖಲಾಯಿತು. ಇದಾದ ಮೇಲೆ 2019-20 ರಲ್ಲಿ ಗೋಚರಿಸಿದ್ದು ಇದೀಗ ಐದು ವರ್ಷದ ನಂತರ ಗೋಚರಿಸಿದೆ.2020 ರಲ್ಲಿ ಇವುಗಳು ಹೆಚ್ಚು ಕಾರವಾರದಲ್ಲಿ ಕಂಡಿದ್ದು ಈ ಬಗ್ಗೆ ಕಡಲ ವಿಜ್ಞಾನಿಗಳು ವೈಜ್ಞಾನಿಕ ಅಧ್ಯಯನ ನಡೆಸಿದ್ದರು.
