Actor Bank Janardhan ನಿಧನ: ಸಾವಿಗೆ ಕಾರಣವೇನು?
ಬೆಂಗಳೂರು;- 500ಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಬ್ಯಾಂಕ್ ಜನಾರ್ಧನ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ (79) ಮಧ್ಯರಾತ್ರಿ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಹಲವು ದಿನಗಳಿಂದ ಬ್ಯಾಂಕ್ ಜನಾರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆಗಾಗಿ ಅವರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕ್ ಜನಾರ್ಧನ್ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಮೂಲದ ಬ್ಯಾಂಕ್ ಜನಾರ್ಧನ್.
ನಟ ಬ್ಯಾಂಕ್ ಜನಾರ್ಧನ್ ಮೂಲತಃ ಚಿತ್ರದುರ್ಗದವರು. 1948ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದವರು.
ಶಾಲಾ ಶಿಕ್ಷಣವನ್ನ ಹುಟ್ಟೂರಲ್ಲೇ ಪಡೆದ ಜನಾರ್ಧನ್ ಆನಂತರ ಬ್ಯಾಂಕ್‌ನಲ್ಲಿ ಕೆಲಸ ಆರಂಭಿಸಿದರು. ಶಾಲಾ - ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲೇ ಜನಾರ್ಧನ್ ಅವರಿಗೆ ನಾಟಕದ ಗೀಳು ಅಂಟಿತ್ತು. ಹಲವು ನಾಟಕಗಳಲ್ಲಿ ಅಭಿನಯಿಸಿದ ನಂತರ ಬ್ಯಾಂಕ್ ಜನಾರ್ಧನ್ 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.
ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದರಿಂದ ತಮ್ಮ ಹೆಸರಿನೊಂದಿಗೆ ಬ್ಯಾಂಕ್ ಸೇರಿಸಿಕೊಂಡರು. ಕೊನೆಗೆ ಬ್ಯಾಂಕ್ ಜನಾರ್ಧನ್ ಎಂದೇ ಪ್ರಸಿದ್ಧರಾದರು.
ಬ್ಯಾಂಕ್ ಜನಾರ್ಧನ್ ಸಿನಿಮಾ ಜರ್ನಿ ಅಸ್ಟು ಸುಲಭವಾಗಿರಲಿಲ್ಲ. ಬ್ಯಾಂಕ್ ನಲ್ಲಿ ಕೆಲಸ ಬಿಡುವಿನ ವೇಳೆ ಸಿನಿಮಾ ಎಂದು ಬ್ಯಾಲೆನ್ಸ್ ಮಾಡುತಿದ್ದ ಇವರು ಕೊನೆಗೆ ಸಿನಿಮಾದಲ್ಲೇ ಹೆಚ್ಚು ಅವಕಾಶ ಗಿಟ್ಟಿಸಿಕೊಂಡರು.
ಸುಮಾರು 500 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಇವರು ಹಾಸ್ಯದ ಪಾತ್ರದ ಮೂಲಕವೇ ಖ್ಯಾತಿ ಗಳಿಸಿದ್ದಾರೆ.2023ರಲ್ಲಿ ತೆರೆಕಂಡ ‘ಉಂಡೇನಾಮ’ ಬ್ಯಾಂಕ್ ಜನಾರ್ಧನ್ ನಟಿಸಿದ ಕೊನೆಯ ಸಿನಿಮಾ ಆಗಿದೆ.
ಬ್ಯಾಂಕ್ ಜನಾರ್ಧನ್ ಕೇವಲ ಹಿರಿ ತೆರೆಯಲ್ಲಿ ಅಲ್ಲದೇ ಕಿರು ತೆರೆಯಲ್ಲೂ ತಮ್ಮ ಅಭಿನಯದ ಚಾಪು ಮೂಡಿಸಿದ್ದಾರೆ.
ಪಾಪಾ ಪಾಂಡು’, ‘ಮಾಂಗಲ್ಯ’, ‘ರೋಬೋ ಫ್ಯಾಮಿಲಿ’, ‘ಜೋಕಾಲಿ’ ಮುಂತಾದ ಸೀರಿಯಲ್‌ಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿದ್ದರು. ಇದೀಗ ಕನ್ನಡ ಚಿತ್ರರಂಗದ ಹಿರಿಜೀವ ಆರಿದ್ದು ,ಹಳೆಯ ಕೊಂಡಿ ಕಳಚಿದಂತಾಗಿದ್ದು ಚಿತ್ರರಂಗಕ್ಕೂ ನಷ್ಟ ತಂದಿದೆ.ಇಂದು ಅವರ ನಿವಾಸದಲ್ಲಿ ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮರಾಠ ಸಂಪ್ರದಾಯದಂತೆ ಪೀಣ್ಯಾ ಚಿತಾಗಾರದಲ್ಲಿ ನಟನ ಅಂತ್ಯ ಕ್ರಿಯೆ ನಡೆಯಲಿದೆ.