Honnavara| ಕಾಂಗ್ರೆಸ್ ಅಬ್ಬರದ ಪ್ರಚಾರ- ಯಾರು ಏನಂದ್ರು?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದಲ್ಲಿ ಅಂಜಲಿ ನಿಂಬಾಳ್ಕರ್ ಅಬ್ಬರದ ಪ್ರಚಾರವನ್ನು ಇಂದು ಮಾಡಿದರು.
ಆರ್.ವಿ ದೇಶಪಾಂಡೆ, ಸಚಿವ ಮಂಕಾಳು ವೈದ್ಯ ,ಬಿಕೆ ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಇಂದು ಅಬ್ಬರದ ಪ್ರಚಾರದಲ್ಲಿ ಭಾಗಿಯಾಗಿದ್ದು ಯಾರು ಏನಂದ್ರು ವಿವರ ಈ ಕೆಳಗಿನಂತಿದೆ.
ಧರ್ಮ, ಜಾತಿಯೆಂದು ಬೊಗಳೆ ಭಾಷಣ ಬಿಡುವ ಬಿಜೆಪಿಗರನ್ನ ದೂರವಿಡಿ: ಹರಿಪ್ರಸಾದ್
ಹತ್ತು ವರ್ಷಗಳಲ್ಲಿ ಬೊಗಳೆ ಭಾಷಣ ಬಿಟ್ಟರೆ ಬಿಜೆಪಿಗರು ಬೇರೇನನ್ನೂ ಮಾಡಿಲ್ಲ. ಧರ್ಮ, ಜಾತಿ, ಭಾಷೆ ಎನ್ನುವ ಬಿಜೆಪಿ ಬೇಕಾ, ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕಾಂಗ್ರೆಸ್ ಬೇಕಾ ಎಂಬುದನ್ನ ಮತದಾರರು ನಿರ್ಧರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕೆಳಗಿನೂರು ಒಕ್ಕಲಿಗರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಂಕಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಸಾರ್ವಜನಿಕ ಕ್ಷೇತ್ರದಲ್ಲಿ ಪವಿತ್ರ ಗ್ರಂಥ. ಅಂಥ ಸಂವಿಧಾನ ಬದಲಾವಣೆ ಮಾಡಲು ಹೊರಟ ಅನಂತಕುಮಾರ್ ಹೆಗಡೆಯವರೇ ಬದಲಾವಣೆಯಾದರು. ಕಣ್ಣೊರೆಸಲು ಅನಂತಕುಮಾರ್ ಹೆಗಡೆಯವರನ್ನ ಬಿಜೆಪಿ ಬದಲಿಸಿದೆ. ಆದರೆ ನಿರಂತರವಾಗಿ ಬಿಜೆಪಿಯಿಂದ ಸಂವಿಧಾನವನ್ನ ಅವಹೇಳನ ಮಾಡಲಾಗುತ್ತಿದೆ. ಪೂರ್ವಜನರಿಗೆ ಗೌರವ ತರಲು ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದರು.
ಬಡವರಿಗೆ ಹಾಕೋಕೆ ಬಟ್ಟೆ ಇರಲ್ಲ. ಆದರೆ ಮಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರು ಯಾವ ಫ್ಯಾನ್ಸಿ ಡ್ರೆಸ್ ಹಾಕೊಂಡು ಬರುತ್ತಾರೋ ಗೊತ್ತಿಲ್ಲ. ಅವರು ಫಿಲ್ಮಿ ಡೈಲಾಗ್‌ಗೇನು ಕಡಿಮೆ ಇಲ್ಲ. ಅವರ ಅಮೃತಕಾಲ ಸಂಪೂರ್ಣ ಬರ್ಬಾದ್ ಆಗಿದೆ. ಅತ್ಯಾಚಾರ ಸಂತ್ರಸ್ತರಿಗೂ ಮಾಲೆ ಹಾಕಿ ಸಿಹಿ ನೀಡಿ ಸಂಭ್ರಮಿಸುವವರು ಬಿಜೆಪಿಗರು. ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಾಗಿ ಭಾಗಿಯಾಗುವವರೇ ಬಿಜೆಪಿಗರು. ಕೋವಿಡ್‌ನಲ್ಲಿ ೪೦ ಲಕ್ಷ ಜನ ಸತ್ತರೂ ಮನೆಯಿಂದ ಹೊರಬಾರದ ನರೇಂದ್ರ ಮೋದಿ, ನವಿಲಿಗೆ ಊಟ ತಿನ್ನಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಈಗ ನಡೆಯುತ್ತಿರುವ ಚುನಾವಣೆಗೆ ಕಾರಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಚುನಾವಣೆ ಪ್ರಜಾಪ್ರಭುತ್ವದ ಅಂಗ. ಸಂವಿಧಾನದ ಆಧಾರದ ಮೇಲೆ ಆರು ಬಾರಿ ಸಂಸದರಾದವರು ಅದೇ ಸಂವಿಧಾನ ಬದಲು ಮಾಡಲು ೪೦೦ ಸ್ಥಾನ ಕೊಡಿ ಎನ್ನುವವರು ಬಿಜೆಪಿಗರು. ಪ್ರಜಾಪ್ರಭುತ್ವವಿದ್ದರೆ ಅಭಿವೃದ್ಧಿ, ಪ್ರಗತಿ ಸಾಧ್ಯ. ಡಿಕ್ಟೇಟರ್‌ಶಿಪ್ ಬಂದರೆ ದೇಶದ ಪ್ರಜಾಪ್ರಭುತ್ವಕ್ಕೆ ಕಷ್ಟವಿದೆ ಎಂದರು.
ಬಡವರ, ರೈತರ, ಮಹಿಳೆಯರ, ಹಿಂದುಳಿದ ಜನಾಂಗಕ್ಕೆ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್. ಚುನಾವಣೆಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಜೆಪಿಗರು ಆಕಾಶ ತೋರಿಸಿದ್ದಾರೆ. ೧೦ ವರ್ಷದಿಂದ ಪ್ರಧಾನಿಯಾಗಿದ್ದವರು ಏನು ಕೊಡುಗೆ ನೀಡಿದ್ದಾರೆ? ನಿರುದ್ಯೋಗ, ಬೆಲೆ ಏರಿಕೆ, ಜಾತೀಯತೆ ಅಷ್ಟೇ ಅವರ ಕೊಡುಗೆ. ರಾಷ್ಟ್ರದ, ರಾಷ್ಟ್ರದ ಜನರ ಹಿತದ ರಕ್ಷಣೆ ಕೇವಲ ಕಾಂಗ್ರೆಸ್ ಅಥವಾ ಇಂಡಿಯಾ ಘಟಬಂಧನದಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸುಳ್ಳು ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ. ಈಗ ಚುನಾವಣೆಗೆ ಮತ್ತೆ ಯಾವುದಾದರೂ ಸುಳ್ಳು ಇಟ್ಟುಕೊಂಡು ಬರುತ್ತಾರೆ. ಬಿಜೆಪಿ ಅಭ್ಯರ್ಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಚುನಾವಣೆ ಬರುತ್ತಿದ್ದಂತೆ ಬಿಜೆಪಿಗರು ಪಾದಯಾತ್ರೆಯನ್ನೂ ಮಾಡಿದರು. ಆದರೆ ಆ ಪಾದಯಾತ್ರೆ ಮಾಡಿದ್ದ ಪುಣ್ಯಾತ್ಮ ಈಗೆಲ್ಲಿದ್ದಾರೆ ಗೊತ್ತಿಲ್ಲ. ಬಿಜೆಪಿಗರು ತಮ್ಮ ಆಡಳಿತದಲ್ಲಿ ಏನು ಮಾಡಿದ್ದಾರೆಂಬುದನ್ನ ತೋರಿಸಲಿ. ೪೦% ಕಮಿಷನ್ ಪಡೆದು ಲೂಟಿ ಮಾಡಿದ್ದು ಬಿಟ್ಟರೆ ಬೇರೇನನ್ನೂ ಅವರು ಮಾಡಿಲ್ಲ ಎಂದು ಜರಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಿಜೆಪಿ ದುರಾಡಳಿತ ಮಾಡಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಮಾಡಿಲ್ಲ. ದಿನೇ ದಿನೇ ಬೆಲೆ ಏರಿಕೆಗೆ ಕಾರಣವಾಗುತ್ತಿರುವ ಬಿಜೆಪಿಯನ್ನ ದೂರವಿಟ್ಟು ಕಾಂಗ್ರೆಸ್‌ಗೆ ಮತ ನೀಡಬೇಕಿದೆ. ಹಿಂದಿನ ಸಂಸದರ ಮುಖ ಎಷ್ಟು ಜನ ನೋಡಿದ್ದೀರೋ ಗೊತ್ತಿಲ್ಲ. ಒಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗದ, ಜನರ ನೋವು ಅರಿಯದ ಈಗಿನ ಬಿಜೆಪಿ ಅಭ್ಯರ್ಥಿ ಲೋಕಸಭಾ ಕ್ಷೇತ್ರವನ್ನ ಪ್ರತಿನಿಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿಕೆ ನೀಡುತ್ತಾರೆ. ಮಂಗಳೂರಿಗೆ ಬಂದಿರುವ ಪ್ರಧಾನಿ ಜೆಡಿಎಸ್‌ನವರ ಈ ಹೇಳಿಕೆಯನ್ನ ಸಮರ್ಥಿಸಿಕೊಳ್ಳುತ್ತಾರಾ? ಬಡವರಿಗೆ ಸಹಾಯ ಮಾಡಿದರೆ ಜೆಡಿಎಸ್- ಬಿಜೆಪಿಗರಿಗೆ ಯಾಕೆ ನೋವಾಗುತ್ತದೆ? ಕುಮಾರಸ್ವಾಮಿಯವರ ಹೇಳಿಕೆಯನ್ನ ಖಂಡಿಸುತ್ತೇನೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಮಹಿಳೆಯರಿಗೆ ಅವರ ಹೇಳಿಕೆಯಿಂದ ಅವಮಾನವಾಗಿದೆ ಎಂದರು.
ಇದು ಬಿಜೆಪಿ- ಕಾಂಗ್ರೆಸ್ ಚುನಾವಣೆಯಲ್ಲ, ನ್ಯಾಯ- ಅನ್ಯಾಯದ ಚುನಾವಣೆ. ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂಸತ್ ನಲ್ಲಿ ಕಿವಿ ಚುಚ್ಚುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಣ್ಯ ಅತಿಕ್ರಮಣದಾರರಿಗೆ ಪರಿಹಾರ, ವಾರ್ಷಿಕ ಒಂದು ಲಕ್ಷ ಮಹಿಳೆಯರಿಗೆ ಸಹಾಯಧನ, ನರೇಗಾ ಕಾರ್ಮಿಕರ ದಿನಗೂಲಿ ೪೦೦ಕ್ಕೆ ಹೆಚ್ಚಳ, ಕಿಸಾನ್ ನ್ಯಾಯ, ಯುವ ನ್ಯಾಯ ತರಲಿದ್ದೇವೆ. ಅಭ್ಯುದಯ- ಏಳ್ಗೆಗೆ ಕಾಂಗ್ರೆಸ್‌ಗೆ ಬೆಂಬಲಿಸಬೇಕು. ನನಗೋಸ್ಕರ ಅಲ್ಲ, ಕಾಂಗ್ರೆಸ್‌ಗಾಗಿಯೂ ಅಲ್ಲ, ನಿಮ್ಮ ಒಳ್ಳೆಯದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸ್ಥಳೀಯ ಮಹಿಳಾ ಕಾರ್ಯಕರ್ತರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು.
ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ, ಬಿಜೆಪಿಗರ ಹಿಂದುತ್ವ ಬೇಕಿಲ್ಲ: ಡಾ.ಅಂಜಲಿ
ಹಿಂದುತ್ವದ ರಕ್ಷಣೆ ಮಾಡುತ್ತೇವೆನ್ನುವ ಬಿಜೆಪಿಗರೇ, ನಾವು ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತು ಬಂದಿದ್ದೇವೆ. ನಿಮ್ಮ ಹಿಂದುತ್ವದ ಪಾಠ ನಮಗೆ ಬೇಕಿಲ್ಲ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.
ಬಳ್ಕೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರದ್ದು ಕೇವಲ ಕೋಮುವಾದಿ ಶಿಕ್ಷಣ, ಬೆಂಕಿ ಹಚ್ಚುವ ಕೆಲಸ. ಛತ್ರಪತಿ ಶಿವಾಜಿ, ಸಾವಿತ್ರಿಬಾಯಿ ಫುಲೆರಂಥವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವವರು ಕಾಂಗ್ರೆಸ್ಸಿಗರು. ಬಿಜೆಪಿಗರು ಕಾಂಗ್ರೆಸ್‌ಗೆ ಬಂದರೂ ಸ್ವಾಗತ, ಬರದಿದ್ದರೂ ಸ್ವಾಗತವಿದೆ. ಕಾಂಗ್ರೆಸ್ ಕುಟುಂಬ ಜಿಲ್ಲೆಯಲ್ಲಿ ಗಟ್ಟಿಯಾಗಿ ನಿಂತಿದೆ. ಬಿಜೆಪಿಗರು ಮೇಲೆ ನೋಡಿ ಮತ ಹಾಕಿ ಎನ್ನುತ್ತಾರೆ. ೧೦ ವರ್ಷದಿಂದ ನೋಡುತ್ತಿದ್ದೇವೆ, ಮೇಲೆ ಏನೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ೧೦ ವರ್ಷದಲ್ಲಿ ಮಾಡದ ಕೆಲಸಗಳನ್ನ ಬಿಜೆಪಿಗರು ಈಗ ಮಾಡುತ್ತಾರಾ? ಏನೂ ಮಾಡಲು ಬಾರದ ಪಕ್ಷ ದೇಶದಲ್ಲಿದ್ದರೆ ಅದು ಬಿಜೆಪಿ ಮಾತ್ರ. ೩೦ ವರ್ಷಗಳಲ್ಲಿ ಜಿಲ್ಲೆಯ ಹೆಸರು ಸಂಸತ್‌ನಲ್ಲಿ ಒಂದೇ ಒಂದು ದಿನ ಬಂದಿಲ್ಲ. ಡಾ.ಅಂಜಲಿ ನಿಂಬಾಳ್ಕರ್ ಅವರು ಜಿಲ್ಲೆಯ ಜನರ ಧ್ವನಿಯಾಗಲಿದ್ದಾರೆ. ಅವರಿಗೆ ಮತ ನೀಡಿ ಆರಿಸಿದರೆ ಮುಂದಿನ ಬಾರಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಇಲ್ಲಿಗೆ ಬರುತ್ತಾರೆ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಯುತ್ತಿದೆ. ಆದರೆ ಸಂವಿಧಾನವನ್ನ ಬಿಜೆಪಿಗರು ಬದಲಿಸುತ್ತೇವೆನ್ನುತ್ತಾರೆ. ಬಿಜೆಪಿ ಹೇಳೋದೊಂದು, ಮಾಡೋದೊಂದು. ಒಂದೇ ಒಂದು ಭರವಸೆಯನ್ನ ಅವರು ಈಡೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನ ಎಲ್ಲರೂ ಸದುಪಯೋಗ ಪಡೆಯುತ್ತಿದ್ದಾರೆ. ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಗೆಲ್ಲಿಸಬೇಕಿದೆ; ನಮ್ಮ ಅಭ್ಯರ್ಥಿ ಡಾ.ಅಂಜಲಿ ಅವರನ್ನ ಆರಿಸಿ ಸಂಸತ್‌ಗೆ ಕಳುಹಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿಯವರು ಇಂದು ಬಿಡುಗಡೆ ಮಾಡಿರುವುದು ಪ್ರಣಾಳಿಕೆಯಲ್ಲ, ಸುಳ್ಳಿನ ಪತ್ರ. ರೈತರ ಆದಾಯ ಡಬಲ್ ಮಾಡುತ್ತೇವೆಂದಿದ್ದ ಬಿಜೆಪಿಗರು ಅವರ ಸಾಲ ಹೆಚ್ಚಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ರೈತರ ಆತ್ಮಹತ್ಯೆ ನಡೆಯುತ್ತಿದೆ, ಯುವಕರು ನಿರುದ್ಯೋಗಿಗಳಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಕೇಳಲು ಮೋದಿಯವರಿಗೆ ಸಮಯವೂ ಇಲ್ಲ. ಉತ್ತರಪ್ರದೇಶದಲ್ಲಿ ಪ್ರತಿ ಆರು ನಿಮಿಷಕ್ಕೊಂದು ಅತ್ಯಾಚಾರ ಆಗುತ್ತಿದೆ. ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವ ಮೋದಿಯವರಿಗೆ ನಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗುತ್ತಿಲ್ಲ. ಭವಿಷ್ಯ ಉಜ್ವಲಗೊಳಿಸುತ್ತೇವೆಂದು ಚಂದ್ರ ತೋರಿಸುವ ಕೆಲಸ ಬಿಜೆಪಿಯಿಂದಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ಡಾ.ಅಂಜಲಿ ಗೆಲುವು ನಮ್ಮೆಲ್ಲರ ಗೆಲುವು. ಹಲವಾರು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆದಿರುವ ಕಾಂಗ್ರೆಸ್ ಸರ್ಕಾರವನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ ಎಂದರು.
ಸುಳ್ಳೇ ಬಿಜೆಪಿಗರ ಬಂಡವಾಳ: ಮಂಕಾಳ ವೈದ್ಯ ಟೀಕೆ
ಹೊನ್ನಾವರ: ಸುಳ್ಳು ಹೇಳುವ ಅವಶ್ಯಕತೆ ನಮಗಿಲ್ಲ. ಬಿಜೆಪಿಗರಿಗೆ ಸುಳ್ಳೇ ಬಂಡವಾಳ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.
ಮಾವಿನಕುರ್ವಾ ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ದೇವರನ್ನ ನಂಬುವವರೂ ನಾವಲ್ಲ. ಮಠ- ದೇವಸ್ಥಾನ ಕಟ್ಟುವುದೇ ನನ್ನ ಕೆಲಸ ಎಂದ ಅವರು, ತೆರಿಗೆ ಹಣದಿಂದಲೇ ಗ್ಯಾರಂಟಿ ಯೋಜನೆ ನೀಡುತ್ತಿರುವುದು ನಿಜ. ಬಿಜೆಪಿ ಆಡಳಿತದಲ್ಲಿ ಈ ತೆರಿಗೆ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.
ಕೆಲಸ ಮಾಡದವರು ಶಾಸಕರಾಗಲು ಯೋಗ್ಯರಲ್ಲ. ದೇಶದ ಎಲ್ಲವನ್ನೂ ಮಾರಲು ಹೊರಟಿರುವವರಿಗೆ ಸಂವಿಧಾನ ಅಡ್ಡಲಾಗಿದೆ. ಅದಕ್ಕಾಗಿ ಬಿಜೆಪಿಗರು ಅದನ್ನು ಬದಲಿಸಲು ಹೊರಟಿದ್ದಾರೆ. ನಾಲ್ಕೂವರೆ ವರ್ಷ ಮಲಗಿದ್ದು ಆರು ತಿಂಗಳಿದ್ದಾಗ ಸುಳ್ಳನ್ನ ಹಿಡಿದು ಚುನಾವಣೆಗೆ ಬರುತ್ತಾರೆ, ಅಂಥವರನ್ನ ನಂಬದಿರಿ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಮತದಾನವೆಂಬ ಅಧಿಕಾರ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಮತಗಳು ಮಾರಾಟವಾಗಬಾರದು. ೧೦ ವರ್ಷಗಳ ಕಾಲ ಬಿಜೆಪಿ, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನ ಈಡೇರಿಸಿಲ್ಲ. ಆರು ಬಾರಿ ಆಯ್ಕೆಯಾದ ಸಂಸದರು ಮಾಡಿದ್ದೇನಿದೆ? ಕೇಂದ್ರದ ಯಾವ ಯೋಜನೆಗಳು ಜಿಲ್ಲೆಗೆ ಬಂದಿವೆ? ಸಂವಿಧಾನ ಬದಲಾಯಿಸಲು ೪೦೦ಕ್ಕೂ ಹೆಚ್ಚು ಸೀಟು ಬೇಕೆನ್ನುತ್ತಾರೆ. ಯಾವ ಸಂವಿಧಾನ ಬದಲಾಯಿಸಬೇಕೆನ್ನುತ್ತಾರೋ, ಅದೇ ಸಂವಿಧಾನದಿಂದಲೇ ಅವರು ಆರು ಬಾರಿ ಆಯ್ಕೆಯಾಗಿದ್ದು ಎಂಬುದನ್ನೂ ಮರೆತಿದ್ದಾರೆ. ಜಾತಿ- ಧರ್ಮದ ಆಧಾರದ ಮೇಲೆ ಬಿಜೆಪಿ ಸರ್ಕಾರ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಮಾಡಬಾರದು. ನಮ್ಮ ಗ್ಯಾರಂಟಿ ಬಗ್ಗೆ ಪ್ರಧಾನಿ, ಬಿಜೆಪಿಗರು ಟೀಕಿಸಿದ್ದರು. ಈಗ ಅವರೇ 'ಯೇ ಮೋದಿ ಕೀ ಗ್ಯಾರಂಟಿ ಹೈ' ಎಂದು ನಮ್ಮ ಶಬ್ದವನ್ನೇ ಕಳವು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ನೆಹರೂರವರಿಂದ ಹಿಡಿದು ಮನಮೋಹನ್ ಸಿಂಗ್‌ರವರೆಗೆ ಕಾಂಗ್ರೆಸ್ ಜನಪರ ಆಡಳಿತ ನೀಡಿದೆ. ಆದರೆ ೧೦ ವರ್ಷಗಳಲ್ಲಿ ಬಿಜೆಪಿ ಮಾಡಿದ್ದೆಲ್ಲ ಅನಾಚಾರ. ಆರು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿಯ ಸಾಧನೆಯೂ ಶೂನ್ಯ. ಒಂದು ಕ್ಷೇತ್ರದ ಜನರ ನೋವನ್ನ ಅರಿಯದವರು ಎಂಟು ಕ್ಷೇತ್ರಗಳನ್ನೊಳಗೊಂಡ ಲೋಕಸಭಾ ಕ್ಷೇತ್ರದ ಜನರಿಗೆ ಸ್ಪಂದಿಸುವರೇ? ಅತಿಕ್ರಮಣದ ಬಗ್ಗೆ ಒಂದೇ ಒಂದು ಬಾರಿ ಸಂಸತ್‌ನಲ್ಲಿ ಈ ಹಿಂದಿನ ಸಂಸದರು ಮಾತನಾಡಿಲ್ಲ. ಈಗಿನ ಬಿಜೆಪಿ ಅಭ್ಯರ್ಥಿಯೂ ಒಮ್ಮೆಯೂ ಅತಿಕ್ರಮಣದಾರರಿಗೆ ಅಭಯ ನೀಡುವ ಕಾರ್ಯವನ್ನೂ ಮಾಡಿಲ್ಲ. ಕೇಂದ್ರದಲ್ಲಿ ಬಡವರ ಪರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಜಿಲ್ಲೆಯಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕಿದೆ ಎಂದು ಕರೆನೀಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ೫೬ ಇಂಚಿನ ವಿಶ್ವಗುರು ನರೇಂದ್ರ ಮೋದಿಯವರು ೧೦ ವರ್ಷಗಳಲ್ಲಿ ಏನು ಮಾಡಿದ್ದೀರಿ ಎನ್ನುವುದನ್ನ ತಿಳಿಸಲಿ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಬಿಜೆಪಿಗರು ಹೇಳುತ್ತಾರೆ. ಅಪಾಯ ಇರುವುದು ಭಾರತೀಯ ಜನತಾ ಪಾರ್ಟಿಗೆ ಹೊರತು ಯಾವ ಧರ್ಮಕ್ಕೂ ಅಲ್ಲ. ೫೬ ಇಂಚಿನ ಎದೆ ಇದ್ದರೆ ಸಾಲದು, ತಲೆಯಲ್ಲಿ ಬುದ್ಧಿನೂ ಇರಬೇಕು. ಪ್ರಧಾನಿ ಒಂಥರ ಊಸರವಳ್ಳಿ ಇದ್ದಂತೆ, ದಿನಕ್ಕೆ ಮೂರು ಫ್ಯಾನ್ಸಿ ಬಟ್ಟೆ ಧರಿಸುತ್ತಾರೆ. ಇದಕ್ಕಾಗ ಅವರನ್ನ ಪ್ರಧಾನಿಯನ್ನಾಗಿ ಮಾಡಿದ್ದು? ಧರ್ಮ- ಜಾತಿ ಹೆಸರಲ್ಲಿ ಮತ ಕೇಳಲು ಬರುವವರಿಗೆ ಪಾಠ ಕಲಿಸಬೇಕಿದೆ ಎಂದು ಕರೆನೀಡಿದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಜನ, ನನ್ನ ಸಮಾಜಕ್ಕೋಸ್ಕರ ಮತ ಭಿಕ್ಷೆ ಕೇಳುತ್ತಿದ್ದೇನೆ. ಈ ಭಿಕ್ಷೆ ಕೇಳಲು ನನಗೆ ಯಾವ ಅಳುಕೂ ಇಲ್ಲ. ಸುಳ್ಳು ಹೇಳಿ ಹಿಂದುತ್ವದ ಹೆಸರಿನಲ್ಲಿ ಯುವಕರನ್ನ ಬಿಜೆಪಿಗರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ್ಮ ತಂದೆ- ತಾಯಿಯರು ನಮಗೆ ಸಂಸ್ಕೃತಿ ಕಲಿಸಿದ್ದಾರೆ, ನಮಗೆ ಹಿಂದುತ್ವದ ಪಾಠ ಹೇಳಲು ಬಿಜೆಪಿಗರು ಯಾರು? ಸಂತ- ಮಹಾತ್ಮ, ದೇವರ ಹೆಸರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಸ್ಥಳೀಯ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು. ಸಾನಮೋಟ ಗ್ರಾಮಸ್ಥರು ಮಂಕಾಳ ವೈದ್ಯ ಅವರಿಗೆ ಸನ್ಮಾನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೃಷ್ಣ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಖಲೀಲ್ ಶೇಖ್ ಉಪಸ್ಥಿತರಿದ್ದರು.