Uttarakannada| ಇಂದು ಜಿಲ್ಲೆಯಲ್ಲಿ ಎಲ್ಲಿ ಏನಾಯ್ತು? ವಿವರ ಇಲ್ಲಿದೆ.
Uttarakannada| ಇಂದು ಜಿಲ್ಲೆಯಲ್ಲಿ ಎಲ್ಲಿ ಏನಾಯ್ತು? ವಿವರ ಇಲ್ಲಿದೆ.
ಕಾರವಾರ:- ಉತ್ತರ ಕನ್ನಡ (uttara kannada) ಜಿಲ್ಲೆಯ ಪ್ರಮುಖ ವಿದ್ಯಮಾನಗಳ ಟಾಪ್ ಸುದ್ದಿಗಳು ಒಂದು ಲಿಂಕ್ ನಲ್ಲಿ ನೀಡಲಾಗಿದೆ. ವಿವರ ಇಲ್ಲಿದೆ.

ಬೈಕ್ ಅಪಘಾತ: ಸ್ಥಳದಲ್ಲಿಯೇ ಯುವಕ ಸಾವು.
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿನಗರದ (sirsi)ಮಾರಿಕಾಂಬಾ ಸರ್ಕಾರಿ ಪ್ರೌಢಶಾಲಾ ಮುಂಭಾಗದಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತನನ್ನು ಶಾಂತಿ ನಗರದ ನಿವಾಸಿ, ನಿಶಾಂತ್ ಬನ್ವಾರಿ ಸಿಂಗ್ ಚೌಧರಿ (20) ಎಂದು ಗುರುತಿಸಲಾಗಿದೆ. ಈತ ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಮನೆಯಲ್ಲಿ ತಯಾರಿಸಿದ್ದ ಸಿಹಿ ಪದಾರ್ಥಗಳನ್ನು ಅಂಗಡಿಯೊಂದಕ್ಕೆ ತಲುಪಿಸಲು ಹೋಗುತ್ತಿದ್ದಾಗ ಆಟೋ ರಿಕ್ಷಾ ಅಡ್ಡ ಬಂದ ಪರಿಣಾಮ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ಯುವಕನಿಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಸುದ್ದಿ ತಿಳಿದ ಕೂಡಲೇ ಸಿಪಿಐ ಶಶಿಕಾಂತ್ ವರ್ಮಾ ಮತ್ತು ಪಿಎಸ್‌ಐ ರತ್ನಾ ಕುರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಗಣೇಶ ಚತುರ್ಥಿ ಪ್ರಯುಕ್ತ ಹೆಚ್ಚುವರಿ ಬಸ್ ಹಾಗೂ ರೈಲು ಸೇವೆ ಸೌಲಭ್ಯ

ಕಾರವಾರ :- ಗಣೇಶ ಚತುರ್ಥಿಯ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ 265 ಹೆಚ್ಚುವರಿ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲಿದೆ.
ಗಣೇಶ ಚತುರ್ಥಿಯ ಸಂದರ್ಭ ಬೆಂಗಳೂರು ಹಾಗೂ ಇತರೆ ಭಾಗದಿಂದ ಜನರು ಜಿಲ್ಲೆಗೆ ಆಗಮಿಸಲಿದ್ದು ಈ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಗಸ್ಟ್ 26ರ ವರೆಗೆ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಗೆ ಈ ಬಸ್‌ಗಳು ಸಂಚರಿಸಲಿವೆ. ಹಬ್ಬದ ನಂತರ, ಆಗಸ್ಟ್ 27ರಿಂದ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳು ಲಭ್ಯವಿರುತ್ತವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಗಣೇಶ ಚತುರ್ಥಿಗೆ ವಿಶೇಷ ರೈಲು: ಬೆಂಗಳೂರಿನಿಂದ ಉತ್ತರ ಕನ್ನಡ ಕರಾವಳಿ ಭಾಗಕ್ಕೆ ಪ್ರಯಾಣಕ್ಕೆ ಇಲ್ಲಿದೆ ಮಾಹಿತಿ
ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಪ್ರಯಾಣಿಸುವ ಸಾವಿರಾರು ಮಂದಿಗೆ ಇದೀಗ ಶುಭ ಸುದ್ದಿಯಿದೆ. ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆ ವಿಶೇಷ ರೈಲನ್ನು ಘೋಷಿಸಿದೆ, ಇದು ಕರಾವಳಿ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.
ಇದನ್ನೂ ಓದಿ:-Karwar|ಅನಾರೋಗ್ಯದ ನಡುವೆಯೇ ಮನೆಗೆ ಬಂದ ಶೈಲ್ ಗೆ ಇಡಿ ಮತ್ತೊಂದು ಶಾಕ್ !
ವಿಶೇಷ ರೈಲು ಸೇವೆ :ಗಣೇಶ ಚತುರ್ಥಿಯ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ರೈಲು ಸಂಖ್ಯೆ 06569/06570 ಎಸ್‌ಎಂವಿಟಿ ಬೆಂಗಳೂರು-ಮಡಗಾಂವ್ ಜಂಕ್ಷನ್ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಈ ರೈಲು ಮಾರ್ಗವು ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ ಮತ್ತು ಕಾರವಾರದಂತಹ ಪ್ರಮುಖ ಕರಾವಳಿ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಆಗಸ್ಟ್ 26, 2025 ರಂದು, ಈ ರೈಲು ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಮುಂಜಾನೆ 5:30ಕ್ಕೆ ಮಡಗಾಂವ್ ತಲುಪಲಿದೆ.
ಆಗಸ್ಟ್ 27, 2025 ರಂದು, ಮಡಗಾಂವ್‌ನಿಂದ ಬೆಳಿಗ್ಗೆ 6:30ಕ್ಕೆ ಹೊರಟು ಅದೇ ದಿನ ರಾತ್ರಿ 11:40ಕ್ಕೆ ಬೆಂಗಳೂರು ತಲುಪಲಿದೆ.
ಇತರೆ ಪ್ರಯಾಣ ಆಯ್ಕೆಗಳು-
ರೈಲು ಸೇವೆಯ ಜೊತೆಗೆ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಸ್ಥೆಗಳು ಸಹ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸುತ್ತವೆ. ಆದರೆ, ಹಬ್ಬದ ಸಮಯದಲ್ಲಿ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಇರುವುದರಿಂದ, ಮುಂಚಿತವಾಗಿಯೇ ಕಾಯ್ದಿರಿಸುವುದು ಉತ್ತಮ. ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ, ರಸ್ತೆ ಪ್ರಯಾಣ ಮಾಡುವವರು ಸಮಯ ನಿರ್ವಹಣೆಯನ್ನು ಯೋಜಿಸಿಕೊಳ್ಳುವುದು ಅವಶ್ಯಕ.
ಒಟ್ಟಾರೆಯಾಗಿ, ಈ ವಿಶೇಷ ರೈಲು ಮತ್ತು ಹೆಚ್ಚುವರಿ ಬಸ್ ಸೇವೆಗಳು, ಹಬ್ಬದ ಸಂಭ್ರಮದಲ್ಲಿ ತಮ್ಮ ಊರಿಗೆ ತೆರಳುವವರಿಗೆ ಅನುಕೂಲಕರ ಮತ್ತು ಸುಗಮ ಪ್ರಯಾಣದ ಆಯ್ಕೆಗಳನ್ನು ಒದಗಿಸಿವೆ.
ವಾ.ಕ.ರ.ಸಾ.ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ

ಕಾರವಾರ- ವಾ.ಕರ.ಸಾ.ಸಂಸ್ಥೆ ಉತ್ತರ ಕನ್ನಡ ವಿಭಾಗದಲ್ಲಿ ಅಪ್ರಂಟಿಸ್ ಕಾಯಿದೆ ಪ್ರಕಾರ ತಾಂತ್ರಿಕ ವೃತ್ತಿಗಳಲ್ಲಿ , ಡೀಸೆಲ್ ಮೆಕಾನಿಕ್, ಆಟೋ ಎಲೆಕ್ಟ್ರೀಷಿಯನ್,ಫಿಟ್ಟರ್,ವೆಲ್ಡರ್, ಟರ್ನರ್.ಮೋಟರ್ ವೆಹಿಕಲ್ ಬಾಡಿ ಬಿಲ್ಡರ್ ಮತ್ತು ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್ ವೃತ್ತಿಗಳಲ್ಲಿ ಐ.ಟಿ.ಐ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳನ್ನು ಶಿಶಿಕ್ಷು ತರಬೇತಿ ಪಡೆಯಲು ಸೆಪ್ಟಂಬರ್4 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನಕ್ಕಾಗಿ ಕರೆಯಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಆಯ್ಕೆ ಪ್ರಾಧಿಕಾರಸ್ಥರಾದ ವಿಭಾಗೀಯ ನಿಯಂತ್ರಣಾಧಿಕಾರಿ. ವಾ.ಕರ.ಸಾ.ಸಂಸ್ಥೆ ಉತ್ತರ, ಕನ್ನಡ ವಿಭಾಗ ವಿಭಾಗೀಯ ಕಛೇರಿ ಶಿರಸಿರವರ ಸಮ್ಮುಖದಲ್ಲಿ ಸಂದರ್ಶನಕ್ಕೆ (ವಾಕ್ ಇನ್ ಇಂಟರ್‌ವ್ಯೂ) ಹಾಜರಾಗಬಹುದಾಗಿದೆ.
ಹೆಚ್ಚಿನ ವಿವರಗಳನ್ನು ವಾ.ಕರ.ಸಾ.ಸಂಸ್ಥೆಯ ವಿಭಾಗೀಯ ಕಛೇರಿ ಶಿರಸಿಗೆ ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ 7760991703 ಕ್ಕೆ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಾ.ಕ.ರ.ಸಾ.ಸಂಸ್ಥೆ ಶಿರಸಿ ಅವರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:-Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್
