ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಬದಲಾವಣೆ! ಜೆಡಿಎಸ್ ತೊರೆದ ಆಸ್ನೋಟಿಕರ್! ತೆನೆ ಹಿಡಿದ ಎಸ್.ಎಲ್.ಘೋಟ್ನೇಕರ್,ಕಾಂಗ್ರೆಸ್ ನಿಂದ ದೂರ ಆಗುತ್ತಿರುವ ಸತೀಶ್ ಸೈಲ್?
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆಯೇ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಮುಖರ ಸೇರ್ಪಡೆ ಮುಂದುವರಿದಿದೆ. ಇದರ ಬೆನ್ನಲ್ಲೇ ಜೆಡಿಎಸ್ ನಿಂದ ಮಾಜಿ ಸಚಿವ ಆಸ್ನೋಟಿಕರ್ ದೂರ ಉಳಿದಿದ್ದು ರಾಷ್ಟ್ರೀಯ ಪಕ್ಷ ಒಂದಕ್ಕೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‍ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ವೀರಭದ್ರಪ್ಪ ಹಾಲರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ. ಎಸ್.ಎಲ್. ಘೋಟ್ನೇಕರ್ ಮತ್ತು ವಡಗೂರು ಹರೀಶ್‍ಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ಇಬ್ರಾಹಿಂ ಅವರು ಈ ಮೂವರು ಮುಖಂಡರಿಗೆ ಪಕ್ಷದ ಧ್ವಜ ನೀಡಿ, ಜೆಡಿಎಸ್ ಶಾಲು ಹೊದಿಸಿ ಬರ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಕಾರವಾರ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಗಳನ್ನು ಗೆಲ್ಲುವ ಅವಕಾಶ ಇದೆ. 2023ಕ್ಕೆ ಘೊಟ್ನೇಕರ್ ಮತ್ತು ಹಾಲರವಿ ಆಯ್ಕೆ ಆಗಿ ವಿಧಾನಸಭೆಗೆ ಬರುತ್ತಾರೆ. ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲೂ ಸಹ ಹದಿನೆಂಟರಲ್ಲಿ ಆರೇಳು ಸ್ಥಾನ ಗೆಲ್ಲುವ ವಾತಾವರಣ ಇದೆ. ಜೆಡಿಎಸ್ ಅಚ್ಚರಿಯ ರೀತಿಯಲ್ಲಿ ಗೆದ್ದು ಬೀಗಲಿದೆ ಎಂದು ಅವರು ನುಡಿದರು.
ಮಾಜಿ ಸಚಿವ ಆಸ್ನೋಟಿಕರ್ ಕಾಂಗ್ರೆಸ್ ಗೆ?
ಆನಂದ್ ಆಸ್ನೋಟಿಕರ್ ಜೆಡಿಎಸ್ ಪಕ್ಷದಿಂದ ದೂರವಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದು ಇಂದು ವಸಂತ್ ಆಸ್ನೋಟಿಕರ್ ರವರ ಪುಣ್ಯ ತಿಥಿ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಮಾತೂಕತೆ ನಡೆಸಿದ್ದು ಈವೇಳೆ ತಾನು ಶೀಘ್ರದಲ್ಲಿ ರಾಷ್ಟ್ರೀಯ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಹೇಳಿಕೆ ನೀಡಿದ್ದು ,ತಾನು ಸೇರ್ಪಡೆಗೊಳ್ಳುವ ಪಕ್ಷವೇ ಅಧಿಕಾರಕ್ಕೆ ಬರಲಿದೆ,ಆಗ ನಮಗೆ ಸ್ಥಾನ ದೊರೆಯುತ್ತದೆ ಎಂದರು. ಇನ್ನು ನನ್ನ ತಾಯಿಯ ಆರೋಗ್ಯ ಸರಿಯಿಲ್ಲ,ಹೀಗಾಗಿ ರಾಜಕೀಯದಲ್ಲಿ ಸಕ್ರಿಯನಾಗಲು ಆಗುತ್ತಿಲ್ಲ, ಹಿಂದೆ ನಡೆದ ಚುನಾವಣೆಯಲ್ಲಿ ಸಾಕಷ್ಟು ಹಣ ಕರ್ಚುಮಾಡಿದ್ದೇನೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ದೇ ಮಾಡಬೇಕಾ ಬೇಡವೇ ಎಂಬ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.
ಸತೀಶ್ ಸೈಲ್ ಅತಂತ್ರ !
ಮೂಲಗಳ ಪ್ರಕಾರ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಪಕ್ಷೇತರರಾಗಿ ಸ್ಪರ್ದೇ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತಿದ್ದು ,ಕಾಂಗ್ರೆಸ್ ನಿಂದ ಒಡನಾಟವಿದ್ದರೂ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಕಾಂಗ್ರೆಸ್ ನ ದೊರೀಣರೊಬ್ಬರು ಹೇಳುವಂತೆ ಆನಂದ್ ಆಸ್ನೋಟಿಕರ್ ಕಾಂಗ್ರೆಸ್ ಗೆ ಬರುತ್ತಾರೆ ,ಅವರು ಅಥವಾ ಸತೀಶ್ ಸೈಲ್ ಹೊರತುಪಡಿಸಿ ಬೇರೆಯವರಿಗೆ ಕಾರವಾರದಿಂದ ಟಿಕೇಟ್ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಕಾರವಾರದಲ್ಲಿ ಸತೀಶ್ ಸೈಲ್ ಪಕ್ಷ ಹೊರತಾಗಿ ಸಂಘಟನೆಯಲ್ಲಿ ತೊಡಗಿದ್ದು ಇದಕ್ಕೆ ಪುಷ್ಟಿ ನೀಡುತ್ತಿದೆ.
ಸದ್ಯ ಕಾರವಾರ ಹಾಗೂ ಹಳಿಯಾಳ ಭಾಗದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆ ಕಾಣಿಸುತಿದ್ದು ಮುಂದಿನ ತಿಂಗಳು ಯಾರು ಯಾವ ಪಕ್ಷದಿಂದ ಸ್ಪರ್ದಿಸಲಿದ್ದಾರೆ ಎಂಬ ಚಿತ್ರಣ ಹೊರಬೀಳಲಿದೆ.