RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ
Darwada News 23 october 2024 /ಕಲಘಟಗಿ : ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಹಳ್ಳದ ನೀರನ್ನು ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋಗಿ, ಮರದ ಬೇರು ಹಿಡಿದು, ಕೊಂಬೆ ಏರಿ ಸಹಾಯಕ್ಕಾಗಿ ಕೂಗಿ ಕರೆದು ಬಚಾವಾದ ಘಟನೆ ಸೋಮವಾರ ತಡರಾತ್ರಿ ರಾತ್ರಿ ನಡೆದಿದೆ.
ಇದನ್ನೂ ಓದಿ:Haliyala|ಆರ್.ವಿ ದೇಶಪಾಂಡೆ ಆಪ್ತನಿಂದ ಅಂಗನವಾಡಿ ಜಾಗ ಒತ್ತುವರಿ -ಗ್ರಾಮಸ್ತರಿಂದ ಮುತ್ತಿಗೆ
ಪುಡಕಲಕಟ್ಟಿ ಗ್ರಾಮದ ನಾಗರಾಜ ದೇವಣ್ಣವರ ಬಚಾವಾದವರಾಗಿದ್ದು ಅವರ ಆರ್ತನಾದ ಕೇಳಿದ ಬಸವರಾಜ ದೇಸೂರ ಎಂಬುವರು ರಾತ್ರಿ 11.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ವಿಷಯ ತಿಳಿದುಕೊಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಕಲಘಟಗಿ ಅಗ್ನಿಶಾಮಕ ದಳದ ಸಿಬ್ಬಂದಿ 2 ಗಂಟೆ ಕಾರ್ಯಾಚರಣೆ ಕೈಗೊಂಡು ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:-Haliyala ವಿದ್ಯುತ್ ಅವಘಡ ಮಳಿಗೆ ಮನೆಗಳು ಬೆಂಕಿಗಾಹುತಿ.
ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೆ ಹೊಂದಿಕೊಂಡಿರುವ ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ ಹಾಗೂ ಹಿರೇಹೊನ್ನಿಹಳ್ಳಿ ಗ್ರಾಮ ಸಂಪರ್ಕಿಸುವ ಮಧ್ಯಭಾಗದಲ್ಲಿರುವ ಬೇಡ್ತಿ ಸೇತುವೆ ಅತಿ ಕೆಳಮಟ್ಟದಲ್ಲಿದೆ.
ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆ ಮೇಲೂ ಹರಿಯುತ್ತಿದೆ.
ಕಲಘಟಗಿ (kalagatagi) ತಾಲೂಕಿನ ಬೇಗೂರು ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದ ನಾಗರಾಜ ದೇವಣ್ಣವರ ಪುಡಕಲಕಟ್ಟಿಗೆ ಮರಳಿ ಬರುವಾಗ ಬೇಡ್ತಿ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಹರಿವನ್ನು ಲೆಕ್ಕಿಸದೆ ಕಾರು ಚಲಾಯಿಸಿಕೊಂಡು ಹೊರಟಿದ್ದರು.
ಸೇತುವೆ ಮಧ್ಯಭಾಗಕ್ಕೆ ಬರುವಷ್ಟರಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಕೊಂಡು ಹೋದರು.
ಕೂಡಲೇ ಕಾರಿನಿಂದ ಹೊರಜಿಗಿದು ಪಕ್ಕದಲ್ಲಿರುವ ಮರದ ಬೇರು ಹಿಡಿದುಕೊಂಡು ಹರಸಾಹಸದಿಂದ ಮರವನ್ನೇರಿ ಕೊಂಬೆ ಮೇಲೆ ಕುಳಿತು ಸಹಾಯಕ್ಕಾಗಿ ಅಂಗಲಾಚಿದ್ದರು.
ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಅಶೋಕ ವಡ್ಡರ, ಥಾವರು ರಾಠೋಡ, ಉಮೇಶ ತೆಂಬದ, ಎಸ್. ಕಿರಣಕುಮಾರ, ಮಹಾಂತೇಶ ಜೋಡಿಗೇರ, ಸಾಯಿರಾಮ ಸಿಂಧೆ, ನಿಖಿಲ್ ಎನ್. ಇತರರು ಸ್ಥಳೀಯರ ನೆರವಿನಿಂದ ರಕ್ಷಿಸಿದರು.