Sirsi: ಶಿರಸಿಯ ಬೇಡರ ವೇಷದ ವಿಶೇಷತೆ ಏನು? ಹೇಗಿದೆ ರೋಷಾವೇಶ
Sirsi: ಶಿರಸಿಯ ಬೇಡರ ವೇಷದ ವಿಶೇಷತೆ ಏನು? ಹೇಗಿದೆ ರೋಷಾವೇಶ

ವಿಡಿಯೋ ವರದಿ- ಅಜಯ್ ಶಿರಸಿ.
Sirsi:-ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಕಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುವ ಬೇಡರ ವೇಷವೂ ಒಂದು. ಶಿರಸಿ ಶ್ರೀ ಮಾರಿಕಾಂಬೆಯ ವೈಭವದ ಜಾತ್ರೆಯ ಮರುವರ್ಷ ಹೋಳಿ ಹುಣ್ಣಿಮೆಯ ಸಂದರ್ಭ ಪ್ರಾರಂಭವಾಗೋ ಈ ರೌದ್ರರಮಣೀಯ ಬೇಡರ ವೇಷದ ಕುಣಿತವನ್ನು ನೋಡಲೆಂದೇ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ.
ನಾಲ್ಕು ದಿನಗಳ ಕಾಲ ಜಾತ್ರೆಯಷ್ಟೇ ಸಂಭ್ರಮದಿಂದ ನಡೆಯುವ ಈ ಜಾನಪದ ಕುಣಿತವನ್ನು ಜನರು ರಾತ್ರಿಯಿಂದ ಬೆಳಗ್ಗಿನವರೆಗೂ ಆಸ್ವಾಧಿಸಿ ವೇಷಧಾರಿಗಳ ಜತೆ ಸ್ಟೆಪ್ ಹಾಕಿ, ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಕಷ್ಟು ಸಂತೋಷ ಪಡುತ್ತಾರೆ.
ಅದರ ವಿಡಿಯೋ ಇಲ್ಲಿದೆ:-
ಬೇಡರ ವೇಷದ ವಿಶೇಷತೆ ಏನು..?..ಇದು ನಡೆಯೋದಾದ್ರೂ ಯಾಕೆ ಅಂತೀರಾ..? ಅದರ ಮಾಹಿತಿ ಇಲ್ಲಿದೆ ನೋಡಿ.
ಮುಖದಲ್ಲಿ ಬಣ್ಣ ಬಣ್ಣದ ಚಿತ್ತಾರ, ಅದಕ್ಕೆ ರೌದ್ರತೆ ನೀಡೋ ಕೆಂಪು ಬಣ್ಣ, ದಪ್ಪ ಮೀಸೆ, ಕೊಂಬು ಹೊಂದಿರೋ ಕಿರೀಟ, ಕಿರೀಟಕ್ಕೆ ಶೋಭೆ ನೀಡೋ ನವಿಲು ಗರಿ, ಮೇಲಿಂದ ಕೆಳಕ್ಕೆ ಸಂಪೂರ್ಣ ಕೆಂಪು ಬಣ್ಣದ ಧಿರಿಸು, ಅದರಲ್ಲಿ ರಾರಾಜಿಸುವ ವಿವಿಧ ಬಣ್ಣಗಳು, ಕೈಯಲ್ಲಿ ಖಡ್ಗ, ಬೆನ್ನ ಹಿಂದೆ ನವಿಲು ಗರಿಗಳ ಪ್ರಭಾವಳಿ.ಇದನ್ನು ನೀಡುತಿದ್ರೆ ಯಕ್ಷಗಾನದ ರೂಪವೇ ಕಣ್ಣಿಗೆ ಕಟ್ಟುತ್ತದೆ.
ಆದರೇ ಇದು ಯಕ್ಷಗಾನದ ವೇಶವಲ್ಲ. ಯಕ್ಷಗಾನದ ವೇಷದಂತೆಯೇ ವಿಶಿಷ್ಟವಾಗಿ ಹೋಳಿ ಹುಣ್ಣಿಮೆಗಾಗಿಯೇ ಹಾಕುವ ಬೇಡರ ವೇಷ.
ಪ್ರತೀ ಎರಡು ವರ್ಷಕ್ಕೊಮ್ಮೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಣಿಸಿಕೊಳ್ಳುವ ಬೇಡರ ವೇಷದ ಝಲಕ್ ಅದರ ನೋಟವೇ ಬೇರೆ. ತಮಟೆಯ ಭರ್ಜರಿ ಸದ್ದಿಗೆ ದೊಡ್ಡ ದೊಡ್ಡ ಹೆಜ್ಜೆ ಹಾಕಿಕೊಂಡು ಖಡ್ಗ ಬೀಸೋ ಈ ವೇಷಧಾರಿಯ ಹಿಂದೆ ಇಬ್ಬರು ಹಗ್ಗದಿಂದ ಹಿಡಿದುಕೊಂಡು ಒಂದೇ ರೀತಿಯ ಹೆಜ್ಜೆ ಹಾಕುತ್ತಾ ರಸ್ತೆಯಿಡೀ ಸಾಗುತ್ತಾರೆ. ಇವರ ಹೆಜ್ಜೆಗೆ ತಲ್ಕಂತೆ ಜನರ ಚಪ್ಪಾಳೆ , ವೇಷಧಾರಿಗಳ ರೌದ್ರತೆ, ಅವರು ಹಾಕೋ ಕೇಕೇ, ತಮಟೆಯ ಸದ್ದು ಜನರನ್ನು ಕೂಡಾ ಹುಚ್ಚೆಬ್ಬಿಸುತ್ತದಲ್ಲದೇ, ವೇಷಧಾರಿಗಳ ಜತೆಗೆ ತಾವೂ ಕೂಡಾ ಮನಸೋ ಇಚ್ಛೆ ಕುಣಿಯುವಂತೆ ಮಾಡುತ್ತದೆ.
ಶಿರಸಿಯ ಈ ಬೇಡರ ವೇಷ ಗಮ್ಮತ್ತು ನಿನ್ನೆಯಿಂದ ಪ್ರಾರಂಭಗೊಂಡಿದ್ದು, ಇನ್ನೆರಡು ದಿನಗಳ ಕಾಲ ಮುಂದುವರಿಯಲಿದೆ. ಒಂದು ವರ್ಷ ಶಿರಸಿಯ ಮಾರಿಕಾಂಬೆಯ ಜಾತ್ರಾ ವೈಭವವಾದರೆ ಮರು ವರ್ಷವೇ ಜಾನಪದ ಕಲೆ ಶಿರಸಿಯ ಬೇಡರ ವೇಷದ ರೌದ್ರರಮಣೀಯ ಕುಣಿತ. ಆಧ್ಯಾತ್ಮಿಕ, ಸಾಂಸ್ಕೃತಿಕ, ಜಾನಪದದ ವೈಶಿಷ್ಟ್ಯದ ಬೇಡರ ವೇಷದ ತಾಲೀಮು ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆ ಶಿರಸಿಯ ವಿವಿಧ ಸರ್ಕಲ್‍ಗಳಲ್ಲಿ, ಗಲ್ಲಿಗಳಲ್ಲಿ ನಡೆದಿದ್ದು, ಹಲಿಗೆ, ತಮಟೆಯನ್ನು ಹಿಡಿದು ಢಣ ಢಣ ಶಬ್ದದೊಂದಿಗೆ ಬೇಡರ ನೃತ್ಯದ ತಾಲೀಮು ನಡೆಸಿ ಇದೀಗ ಅಂಗಳಕ್ಕೆ ದುಮುಕಿದ್ದಾರೆ.
ಬೇಡರ ವೇಷದ ಹಿನ್ನಲೆ ಏನು?
ಬೇಡರ ವೇಷದ ಉಗಮತೆಯ ಇತಿಹಾಸ ಇಲ್ಲದಿದ್ದರೂ ಇದೊಂದು ಪುರಾತನ ಸಂಪ್ರದಾಯಕ್ಕೆ ಸುತ್ತಿಕೊಂಡಿದೆ.
ಜನರಾಡುವ ಕಥೆಗಳ ಪ್ರಕಾರ, ಹಿಂದೆ ಬೇಡರ ಸಮುದಾಯಕ್ಕೆ ಸೇರಿದ್ದ ಓರ್ವ ಬಲಿಷ್ಟ ಕಳ್ಳನಿದ್ದ. ಪ್ರಾರಂಭದಲ್ಲಿ ಈತ ಉತ್ತಮನೇ ಆಗಿದ್ದು, ರಾಜರ ರಕ್ಷಣೆಗಾಗಿ ನೇಮಕಗೊಂಡಿದ್ದ. ಆದರೆ, ಬಳಿಕ ಸ್ಥಿತಿಗೆ ಅನುಗುಣವಾಗಿ ಆತ ಕಳ್ಳನಾದನಂತೆ
ದೈಹಿಕವಾಗಿ ಬಲಿಷ್ಠನಾಗಿದ್ದ ಈತ ಕತ್ತಿವರಸೆಯಲ್ಲೂ ಪರಿಣಿತಿ ಹೊಂದಿದ್ದು, ಧೀರತೆ, ವೀರತೆ ಆತನ ನಡೆಯಾಗಿತ್ತು. ಆತ ಊರು- ಊರುಗಳಲ್ಲೆಲ್ಲಾ ಧನಿಕರ ಮನೆಯನ್ನು ಕಳ್ಳತನ ಮಾಡಿ ಆ ಹಣ, ಆಭರಣಗಳನ್ನು ಬಡವರಿಗೆ ಹಂಚುತ್ತಿದ್ದ. ಹೀಗಾಗಿ ಆತ ಜನಸಾಮಾನ್ಯರಿಗೆ ಬೇಕಾದ ವ್ಯಕ್ತಿಯಾಗಿ ಬೆಳೆದಿದ್ದ.
ಈತನನ್ನು ಹಿಡಿಯಲು ರಾಜ ತನ್ನ ಭಟರಿಗೆ ಕಟ್ಟಪ್ಪಣೆ ಮಾಡಿದ್ದನಂತೆ. ಆದರೆ, ಆತ ಮಾತ್ರ ಸಿಗುತ್ತಿರಲಿಲ್ಲ. ಜನ ಸಾಮಾನ್ಯರ ಕೃಪೆ, ಅನುಕಂಪ ಹೊಂದಿದ್ದ ಕಳ್ಳನಾಗಿದ್ದರಿಂದ ಜನರು ಈತನ ಬಗ್ಗೆ ಯಾವುದೇ ಸುಳಿವನ್ನು ನೀಡುತ್ತಿರಲಿಲ್ಲ. ಅದರ ಬದಲು ಅವನನ್ನು ರಾಜಭಟರ ಕಣ್ಣಿಗೆ ಬೀಳದಂತೆ ರಕ್ಷಿಸುತ್ತಿದ್ದರು. ಒಂದು ದಿನ ವೇಶ್ಯೆಯ ಮನೆಗೆ ಹೋಗಿದ್ದ ಈ ಕಳ್ಳನನ್ನು ಆ ವೇಶ್ಯೆಯು ಮೋಸದಿಂದ ಹಿಡಿದು ರಾಜಭಟರಿಗೆ ಒಪ್ಪಿಸುತ್ತಾಳೆ. ಆ ಬಲಿಷ್ಠ ಕಳ್ಳನನ್ನು ಹಗ್ಗದಿಂದ ಕಟ್ಟಿ ರಾಜಭಟರು ಎಳೆದೊಯ್ಯುತ್ತಾರೆ.
ಇದನ್ನೂ ಓದಿ:-Sirsi : ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ನ್ಯೂ ಮಾರ್ಕೇಟ್ ಠಾಣೆ ಹೆಡ್ ಕಾನಸ್ಟೇಬಲ್ ! ವಿಡಿಯೋ ವೈರಲ್
ಇನ್ನು ಆ ಕಳ್ಳ ನನ್ನನ್ನು ಮೋಸದಿಂದ ಹಿಡಿದುಕೊಟ್ಟೆಯಾ ಎಂದು ಅವಳನ್ನು ಖಡ್ಗದಿಂದ ಕಡಿದು ಹಾಕಲು ಮುಂದಾಗುವ ದೃಶ್ಯವೇ ಬೇಡನ ರೌದ್ರಾವತಾರ. ಈಗಿನ ಬೇಡರ ವೇಷ( Bedara vesha),
ಇದನ್ನೂ ಓದಿ:-Uttara kannda ತಾಲೂಕು ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಿಲ್ಲ ಸಚಿವರು ಹೇಳಿದ್ದೇನು?
ಕಳ್ಳನನ್ನು ನಾವು ಹಿಡಿದಿದ್ದೇವೆ ಎಂದು ಜನರಿಗೆ ಡಂಗೂರ ಸಾರುವವರೇ ಇಂದು ವೇಷಧಾರಿಯ ಮುಂದೆ ತಮಟೆ ಬಾರಿಸುವವರು. ಆಗ ಕಳ್ಳನನ್ನು ರಾತ್ರಿ ಸಂದರ್ಭದಲ್ಲಿ ಹಿಡಿದಿದ್ದರಿಂದ ಬೆಳಕಿಗಾಗಿ ಹಿಲಾಲು ಅಥವಾ ಜೀಟಿಗೆ ಹಿಡಿದು ಮುಂದೆ ಸಾಗುತ್ತಿದ್ದರು. ಇಂದು ಕೂಡಾ ಜೀಟಿಗೆ ಹಿಡಿದು ಸಾಗುವ ಪರಿಪಾಠ ಬೇಡರ ವೇಷದಲ್ಲಿ ಇದೆಯಾದ್ರೂ, ಮುನ್ಚೆಚ್ಚರಿಕೆಯ ಸಲುವಾಗಿ ಈ ಕ್ರಮವನ್ನು ನಿಷೇಧಿಸಲಾಗಿದೆ. ಇನ್ನು ಈ ಹಿಂದೆ ಚರ್ಮದ ಹಲಗೆ ಬಾರಿಸುವ ಪರಿಪಾಠವಿತ್ತು. ಆದರೆ, ಪ್ರಸ್ತುತ ಚರ್ಮದ ಅಭಾವದಿಂದ ಫೈಬರ್ ಹಲಗೆಯನ್ನೇ ಬೇಡರ ವೇಷಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ಇದು ಶಿರಸಿಯ ಬೇಡರ ವೇಷದ ವಿಶೇಷವಾಗಿದ್ದು ಇತ್ತೀಚಿನ ದಿನದಲ್ಲಿ ಗ್ರಾಮೀಣ ಜನಪದ ಕಲೆಗಳನ್ನು ಉಳಿಸುವ ದೃಷ್ಟಿಯಲ್ಲಿ ಯುವಕರು ಸಹ ಈ ಬೇಡರ ಕಲೆಗೆ ಬೆಂಬಲವಾಗಿ ನಿಂತರೆ ,ಶಿರಸಿ (sirsi) ಜನ ಬೆನ್ನುತಟ್ಟಿ ಪ್ರೋತ್ಸಾಹಿಸಿ ಬೆಳಸಿಕೊಂಡು ಬಂದಿದ್ದಾರೆ.