ಉತ್ತರ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನ| ಸಮ್ಮೇಳನಕ್ಕೆ ಸಿಗುತ್ತಿಲ್ಲ ಅನುದಾನ
ಉತ್ತರ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನ| ಸಮ್ಮೇಳನಕ್ಕೆ ಸಿಗುತ್ತಿಲ್ಲ ಅನುದಾನ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 25 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ.ಆದರೇ ಈ ಕಾರ್ಯಕ್ರಮ ಸರ್ಕಾರದ ಅನುದಾನದ ಹಣದಲ್ಲಿ ನಡೆಯದೇ ಇರುವುದು ವಿಶೇಷವಾದರೇ ಸಾಹಿತ್ಯ ಪ್ರೇಮಿಗಳೇ ತಮ್ಮ ಹಣದಿಂದ ನಡೆಸುತ್ತಿದ್ದಾರೆ.ಈ ಹಿಂದೆ ನಡೆಸಿದ ಮೂರು ಸಮ್ಮೇಳನಗಳಿಗೆ ರಾಜ್ಯ ಸಂಘದಿಂದ ಬರಬೇಕಾದ ಅನುದಾನದ ಹಣ ಬಂದಿಲ್ಲ
11 ತಾಲೂಕು ಸಮ್ಮೇಳನ ಕ್ಕೆ ಸರ್ಕಾರದಿಂದ ಬರಬೇಕಾದ ಹಣವೇ ಬಂದಿಲ್ಲ. ಜಿಲ್ಲಾ ಸಮ್ಮೇಳನಕ್ಕೆ 5ಲಕ್ಷ ಹಾಗೂ ತಾಲೂಕು ಸಮ್ಮೇಳನಗಳಿಗೆ ಒಂದು ಲಕ್ಷ ಹಣ ಅನುದಾನ ಬರುತ್ತದೆ .ಆದರೇ ಹಲವು ಸಮ್ಮೇಳನಗಳು ನಡೆದರೂ ಈವರೆಗೂ ಅನುದಾನವೇ ಬಂದಿಲ್ಲ. 15 ಸಾವಿರ ತಾಲೂಕು ನಿರ್ವಹಣ ಅನುದಾನ ನೀಡಲಾಗುತ್ತದೆ ಆ ಹಣವು ಸಹ ಬಾರದಿರುವುದು ಗಡಿ ಜಿಲ್ಲೆಯ ನಿರ್ಲಕ್ಷದ ಬಗ್ಗೆ ಕಿಡಿ ಹೊತ್ತಿಸುವಂತೆ ಮಾಡಿದೆ.
ದಾನಿಗಳ ಸಹಾಯದಿಂದ ನಡೆಯಲಿದೆ ಜಿಲ್ಲಾ ಸಾಹಿತ್ಯ ಸಮ್ಮೇಳನ.
ಕಾನನದ ನಾಡು, ಕಾಗದದ ನಗರಿ ದಾಂಡೇಲಿ ಅಕ್ಷರಶಃ ಹಬ್ಬದ ವಾತಾವರಣಕ್ಕೆ ಸಜ್ಜಾಗಿದೆ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತನ್ನ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾದ '25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ'ವನ್ನು (ಬೆಳ್ಳಿ ಹಬ್ಬ) ಇದೇ ಡಿಸೆಂಬರ್ 13, 14 ಮತ್ತು 15ರಂದು ದಾಂಡೇಲಿ ನಗರದಲ್ಲಿ ಅದ್ದೂರಿಯಾಗಿ ಆಯೋಜಿಸಿದೆ.ಈ ಕುರಿತು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಅವರು ಪತ್ರಿಕಾಗೋಷ್ಠಿಯಲ್ಲಿ ಸವಿವರವಾದ ಮಾಹಿತಿ ನೀಡಿದ್ದಾರೆ.
ಐತಿಹಾಸಿಕ ಮೈಲಿಗಲ್ಲು:
ಬೆಳ್ಳಿ ಹಬ್ಬದ ಸಂಭ್ರಮರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ಈವರೆಗೆ 25 ಸಾಹಿತ್ಯ ಸಮ್ಮೇಳನಗಳು ನಡೆದ ಉದಾಹರಣೆಯಿಲ್ಲ. ಈ ಹಿನ್ನೆಲೆಯಲ್ಲಿ, ಅತಿ ಹೆಚ್ಚು ಸಮ್ಮೇಳನಗಳನ್ನು ಸಂಘಟಿಸಿದ ಹೆಗ್ಗಳಿಕೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಅಧ್ಯಕ್ಷ ಬಿ.ಎನ್. ವಾಸರೆ ಹರ್ಷ ವ್ಯಕ್ತಪಡಿಸಿದರು.
ಈ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸಮ್ಮೇಳನವನ್ನು ಎರಡು ದಿನಗಳ ಬದಲಿಗೆ ಮೂರು ದಿನಗಳ ಕಾಲ ವಿಸ್ತರಿಸಲಾಗಿದ್ದು, ಕಾರ್ಯಕ್ರಮದಲ್ಲಿ ವೈವಿಧ್ಯಮಯ ಮತ್ತು ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ರವಿದಾಸ್ ನಾಯಕ್ ಸರ್ವಾಧ್ಯಕ್ಷತೆ, ಬರಗೂರು ಅವರಿಂದ ಉದ್ಘಾಟನೆ ಈ ಬಾರಿಯ ಬೆಳ್ಳಿ ಹಬ್ಬದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರವಿದಾಸ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ನಾಡಿನ ಖ್ಯಾತ ಚಿಂತಕ ಹಾಗೂ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ನೆರವೇರಿಸಲಿದ್ದಾರೆ.
ಸ್ಥಳೀಯ ಶಾಸಕರು ಹಾಗೂ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಭರಪೂರ ಸಿದ್ಧತೆಗಳು ನಡೆದಿವೆ.
ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮುಂತಾದ ಗಣ್ಯರು ವೇದಿಕೆಯನ್ನು ಅಲಂಕರಿಸಲಿದ್ದಾರೆ.
'25'ರ ವಿಶೇಷತೆ: ಹಬ್ಬದ ವಿಶೇಷವಾಗಿ '25' ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ 25ನೇ ವರ್ಷದ ಸ್ಮರಣಾರ್ಥವಾಗಿ ಒಟ್ಟು 25 ಹೊಸ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು.
ಮಾಜಿ ಅಧ್ಯಕ್ಷರಿಗೆ ಗೌರವ:
ಈ ಹಿಂದೆ ಸಮ್ಮೇಳನಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ವೇದಿಕೆಗೆ ಆಹ್ವಾನಿಸಿ ಗೌರವಿಸಲಾಗುವುದು. ಸಮ್ಮೇಳನದ ಎರಡನೇ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಸಾಧಕರಿಗೆ 'ಕಸಾಪ ಪುರಸ್ಕಾರ' ನೀಡಿ ಸನ್ಮಾನಿಸಲಾಗುವುದು.ಸಮಾರೋಪದ ದಿನವಾದ ಮೂರನೇ ದಿನದಂದು ಜಿಲ್ಲೆಯ 25 ಸಾಧಕರಿಗೆ 'ರಜತ ಗೌರವ' ಸಮರ್ಪಿಸಲಾಗುವುದು.
ಹತ್ತು ವಿಶೇಷ ಗೋಷ್ಠಿಗಳು: ಚಿಂತನ-ಮಂಥನ
ಸಮ್ಮೇಳನದಲ್ಲಿ ಕೇವಲ ಸನ್ಮಾನಗಳಲ್ಲದೆ, ಗಂಭೀರ ವಿಷಯಗಳ ಚರ್ಚೆಗೂ ವೇದಿಕೆ ಒದಗಿಸಲಾಗಿದೆ. ಒಟ್ಟು ಹತ್ತು ವಿಶೇಷ ಗೋಷ್ಠಿಗಳು ನಡೆಯಲಿದ್ದು, ಪ್ರಮುಖವಾಗಿದೆ.
ಪ್ರಮುಖ ವಿಶೇಷ.
ಜಿಲ್ಲೆಯ ಸಾಹಿತ್ಯದ ಅಸ್ಮಿತೆ ಮತ್ತು ಆಶಯಗಳ ಕುರಿತು ಚರ್ಚೆ,ಅಗಲಿದ ಹಿರಿಯ ಸಾಹಿತಿಗಳ ಸ್ಮರಣೆ.
ನೈತಿಕತೆಯ ರಾಜನೀತಿ ಮತ್ತು ಉತ್ತರ ಕನ್ನಡ ಎಂಬ ಜಿಲ್ಲೆಯ ರಾಜಕೀಯ ಪ್ರಜ್ಞೆಯನ್ನು ಬಿಂಬಿಸುವ ಈ ವಿಶೇಷ ಗೋಷ್ಠಿಯಲ್ಲಿ ದಿನಕರ ದೇಸಾಯಿ, ರಾಮಕೃಷ್ಣ ಹೆಗಡೆ, ಬಿ.ವಿ. ನಾಯಕ್ ಹಾಗೂ ಎಸ್.ಎಲ್. ಯಾರ್ಯ ಅವರಂತಹ ಧೀಮಂತ ನಾಯಕರ ಕುರಿತು ಉಪನ್ಯಾಸ ನಡೆಯಲಿದೆ.
'ಕಾಳಿಕಳಿವೆ ಸುತ್ತ' ಎಂಬ ಶೀರ್ಷಿಕೆಯಡಿ ದಾಂಡೇಲಿಯ ಸ್ಥಳೀಯ ಮಹತ್ವವನ್ನು ಚರ್ಚಿಸಲಾಗುವುದು.ನನ್ನ ಉತ್ತರ ಕನ್ನಡ - ಕಾಲುಶತಮಾನ ನಡಿಗೆ ಎಂಬ ವಿಷಯದಡಿ ಮೂರನೇ ದಿನ ಈ ವಿಶೇಷ ಗೋಷ್ಠಿ ನಡೆಯಲಿದೆ.
ಇದಲ್ಲದೆ, ರಾಜ್ಯಮಟ್ಟದ ವಿಶೇಷ ವಿಚಾರ ಸಂಕೀರ್ಣವೊಂದನ್ನು ಆಯೋಜಿಸಲಾಗಿದ್ದು, ಇದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅನುದಾನದ ಕೊರತೆ:
ಛಲ ಬಿಡದ ಸಂಘಟಕರು ಸಮ್ಮೇಳನಕ್ಕೆ ಆರ್ಥಿಕ ಸವಾಲು ಎದುರಾಗಿದ್ದರೂ ಹಿಂಜರಿಯದಿರಲು ಪರಿಷತ್ತು ನಿರ್ಧರಿಸಿದೆ. "ಜಿಲ್ಲಾ ಸಮ್ಮೇಳನಕ್ಕೆ ಸರ್ಕಾರದಿಂದ ಬರಬೇಕಾದ 5 ಲಕ್ಷ ರೂ. ಹಾಗೂ ತಾಲೂಕು ಸಮ್ಮೇಳನಕ್ಕೆ 1 ಲಕ್ಷ ರೂ. ಅನುದಾನ ಮಾರ್ಚ್ ತಿಂಗಳಿನಿಂದಲೂ ಬಿಡುಗಡೆಯಾಗಿಲ್ಲ. ಆದರೂ, ಅನುದಾನ ಇಲ್ಲವೆಂಬ ಕಾರಣಕ್ಕೆ ಸಾಂಸ್ಕೃತಿಕ ಕಾರ್ಯಗಳನ್ನು ನಿಲ್ಲಿಸಬಾರದು ಎಂಬ ದೃಢ ನಿರ್ಧಾರ ನಮ್ಮದು ಎಂದು ಜಿಲ್ಲಾಧ್ಯಕ್ಷ ವಾಸರೆ ಸ್ಪಷ್ಟಪಡಿಸಿದರು.
Dandeli |ಕಾಳಿ ನದಿಯ ಕಬ್ಬಿಣದ ಬೇಲಿ ದಾಟಿ ಬಂದ ಮೊಸಳೆ ! ವಿಡಿಯೋ ನೋಡಿ
ಸಾಹಿತಿಗಳಿಗೆ ಸಲ್ಲಬೇಕಾದ ಗೌರವ ಒಂದು ವರ್ಷ ತಪ್ಪಿದರೆ ಅದು ಅವರಿಗೆ ಮಾಡುವ ಅನ್ಯಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಸಾಂಸ್ಕೃತಿಕ ವೈಭವ,ಮೂರು ದಿನಗಳ ಕಾಲ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ
ಬಿಗ್ ಬಾಸ್ ಖ್ಯಾತಿಯ ಹಾಗೂ ಹಿನ್ನೆಲೆ ಗಾಯಕ ರವಿ ಮೂರೂರು ಅವರ ನೇತೃತ್ವದಲ್ಲಿ 'ಭಾವ ಸಂಗಮ' ಹಾಗೂ ದರ್ಶನ್ ಶೆಟ್ಟಿ, ವರ್ಷಿಣಿ ಶೆಟ್ಟಿ ಅವರಿಂದ 'ಗಾನ ಮಧುರ' ಸಂಗೀತ ಕಾರ್ಯಕ್ರಮ.
ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಸಮಾರೋಪ ದಂದು ಶತಮಾನ ಕಂಡ ಹಿರಿಯ ಜೀವ, ಗುರು ಚನ್ನಬಸಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಒಟ್ಟಾರೆಯಾಗಿ, ಅನುದಾನದ ನಿರೀಕ್ಷೆ ಇಲ್ಲದೆ, ಕೇವಲ ಕನ್ನಡದ ಮೇಲಿನ ಅಭಿಮಾನ ಮತ್ತು ಬದ್ಧತೆಯಿಂದ ಈ ಬೆಳ್ಳಿ ಹಬ್ಬದ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕಸಾಪ ಪಣತೊಟ್ಟಿದ್ದು, ಜಿಲ್ಲೆಯ ಸಮಸ್ತ ಜನತೆ ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.