Dandeli: ದೇವರ ದರ್ಶನಕ್ಕೆ ಹೋದವರ ಹೊಡಿಬಡಿ ಆಟ! ಇಬ್ಬರು ಗಂಭೀರ ಗಾಯ
Dandeli: ದೇವರ ದರ್ಶನಕ್ಕೆ ಹೋದವರ ಹೊಡಿಬಡಿ ಆಟ! ಇಬ್ಬರು ಗಂಭೀರ ಗಾಯ

ಕಾರವಾರ : ಶ್ರೀ ಕ್ಷೇತ್ರ ಉಳವಿಗೆ (ulvi)ಹೋಗಿ ಹಿಂದಿರುಗಿ ಬರುತ್ತಿದ್ದ ಯಾತ್ರಾರ್ಥಿಗಳ ತಂಡವೊಂದು ಇನ್ನೊಂದು ಯಾತ್ರಾರ್ಥಿಗಳ ತಂಡದ ಮೇಲೆ ಹಲ್ಲೆ ನಡೆಸಿ ಇಬ್ಬರಿಗೆ ಗಂಭೀರ ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ನಗರದ ಕುಳಗಿ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಉಳವಿಗೆ ಹೋಗಿ ಹಿಂದಿರುಗಿ ಬರುತ್ತಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಯಾತ್ರಾರ್ಥಿಗಳ ಏಳೆಂಟು ಜನರ ತಂಡವೊಂದು ನಗರದ ಕುಳಗಿ ರಸ್ತೆ ಬದಿಯಲ್ಲಿ ನಿಂತಿದ್ದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಾದ್ರೋಳ್ಳಿಯ ಯಾತ್ರಾರ್ಥಿಗಳ ತಂಡದ ಮೇಲೆ ಏಕಾಏಕಿ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಕಾದ್ರೋಳ್ಳಿ ಯಾತ್ರಾರ್ಥಿಗಳ ತಂಡದ ಸದಸ್ಯರಾದ ಅದೃಶ್ಯಪ್ಪ ಹೊಳೆ ಮತ್ತು ನಾಗರಾಜ ಕಳಸನ್ನವರ ಎಂಬಿಬ್ಬರಿಗೆ ಗಾಯವಾಗಿದೆ. ಅದೃಶ್ಯಪ್ಪ ಹೊಳೆ ಎಂಬವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ.

ಗಾಯಗೊಂಡ ಇಬ್ಬರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹಲ್ಲೆ ಮಾಡಿದ ತಂಡದವರು ತಾವು ತಂದಿದ್ದ ವಾಹನವನ್ನು ಅಲ್ಲೆ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:-Dandeli: ಮೈಕ್ರೋ ಫೈನಾನ್ಸ್ ಹಾವಳಿ ಮನೆಬಿಟ್ಟ 20 ಕುಟುಂಬ
ನಗರ ಠಾಣೆಯ ಪಿಎಸ್ಐ ಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್ ಮತ್ತು ಅಂಬಿಕಾನಗರ ಠಾಣೆಯ ಪಿಎಸ್ಐ ಮಹೇಶ ಮೇಲಗೇರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹಲ್ಲೆ ಮಾಡಿದ ತಂಡದವರ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆ ಮಾಡಿ ಪರಾರಿಯಾದವರ ಪತ್ತೆಗೆ ತೀವ್ರ ಶೋಧ ನಡೆಸಿದ್ದು ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.