Haliyala ರಾಜಕೀಯದಲ್ಲಿ ಬಿಜೆಪಿಗೆ ಎರಡು ಕೋಡು! ಬಿನ್ನರಾಗದಲ್ಲಿ ನಾಯಕರು!
ವರದಿ-ಸಾಗರ್
Haliyala news 30 November 2024 :-ರಾಜ್ಯದಲ್ಲಿ ಜೆಡಿಎಸ್ (JDS ) ನಲ್ಲಿ ಭಿನ್ನಮತ ಏಳುತಿದ್ದಂತೆ ಇತ್ತ ಜೆಡಿಎಸ್ ನಾಯಕರು ಬಿಜೆಪಿಯತ್ತ ವಾಲುತಿದ್ದು ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡ ಮಾಜಿ ಎಮ್.ಎಲ್.ಸಿ ಎಸ್.ಎಲ್ ಘೋಟ್ನೇಕರ್ ಶನಿವಾರ ಶಿರಸಿಯ ಬಿಜೆಪಿ(BJP) ಕಚೇರಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತ್ರತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.
ಹಳಿಯಾಳದ ಮರಾಠ ಮುಖಂಡ ಹಾಗೂ ಎರಡುಬಾರಿ ಎಮ್.ಎಲ್.ಸಿ ಜೊತೆಗೆ ಜಿಲ್ಲಾ KDCC ಬ್ಯಾಂಕ್ ನಲ್ಲಿ ಎರಡುಬಾರಿ ಅಧ್ಯಕ್ಷರಾಗಿದ್ದ ಎಸ್.ಎಲ್ ಘೋಟ್ನೇಕರ್ ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಿಂದ ಟಿಕೆಟ್ ಸಿಗದೇ ಜೆಡಿಎಸ್ ನಿಂದ ಹಳಿಯಾಳ (Haliyala) ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದರು.
ಭಿನ್ನರಾಗ ಎರಡು ತಾಳ!
ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ತನ್ನದೇ ಆದ ಖದರ್ ಬೆಳಸಿಕೊಂಡು ಬಂದವರು. ಅನಂತಕುಮಾರ್ ಹೆಗಡೆ ಬೆಂಬಲದಲ್ಲಿ ಇದ್ದವರು. ಆದ್ರೆ ಇದೀಗ ಜಿಲ್ಲೆಯ ರಾಜಕೀಯ ಶಕ್ತಿ ಕಾಗೇರಿ ಕೈವಶವಾಗಿದೆ.
ಪಕ್ಷ ಸಂಘಟನೆ ಜೊತೆ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಕಾಗೇರಿ ಹಳಿಯಾಳದಲ್ಲಿ ಎರಡು ಬೆಂಕಿಯನ್ನು ಪಕ್ಷದಲ್ಲಿ ಹೆಚ್ಚಿಸಿದ್ದಾರೆ.
ಹಳಿಯಾಳದಲ್ಲಿ ಆರ್.ವಿ ದೇಶಪಾಂಡೆ ಎದುರಾಳಿಯಾಗಿ ಪ್ರಭಲವಾಗಿ ಬೆಳದ ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿ ಚುನಾವಣೆಯಲ್ಲಿ ಅಲ್ಪ ಅಂತರದ ಸೋಲು ಕಂಡವರು.
ಒಂದಲ್ಲಾ ಒಂದು ದಿನ ಮತ್ತೆ ಶಾಸಕನಾಗುವ ಗುರಿಯನ್ನು ಹೊಂದಿರುವ ಸುನೀಲ್ ಹೆಗಡೆ ಮತ್ತೆ ಮುಂಬರುವ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವಾಗಲೇ ಎದುರಾಳಿ ಮಾಜಿ MLC ಘೋಟ್ನೇಕರ್ ರನ್ನು ಕಾಗೇರಿ ಮುತುವರ್ಜಿಯಿಂದ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇನ್ನು ಘೋಟ್ನೇಕರ್ ಬಿಜೆಪಿ ಸೇರ್ಪಡೆಗೊಳ್ಳುತಿದ್ದಂತೆ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅಸಮಧಾನ ಹೊರಹಾಕಿದ್ದಾರೆ.
ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ತಾಲೂಕು ಪಕ್ಷದ ಮುಖಂಡರು,ನಾಯಕರಲ್ಲಿ ಅಭಿಪ್ರಾಯ ಕೇಳಿ ಎಲ್ಲರ ಒಪ್ಪಿಗೆಮೇಲೆ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಆದರೇ ಘೋಟ್ನೇಕರ್ ರವರನ್ನು ಸೇರಿಸಿಕೊಳ್ಳುವಾಗ ಇದು ಪಾಲನೆಯಾಗಲಿಲ್ಲ ,ಅವರಿಗೊಂದು ನ್ಯಾಯ ನನಗೊಂದು ನ್ಯಾಯಾ ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಸುನೀಲ್ ಹೆಗಡೆ ಗೈರಾಗುವ ಮೂಲಕ ಅಸಮಧಾನ ಹೊರಹಾಕಿದ್ದಾರೆ.
ಪಕ್ಷ ಎರಡು ಹೋಳು!
ಇನ್ನು ಎರಡು ಶಕ್ತಿಗಳು ಒಂದು ಪಕ್ಷದಲ್ಲಿ ಇರುವುದರಿಂದ ಪೈಪೋಟಿ ಸಹ ಎದುರಾಗುವ ಎಲ್ಲಾ ಸೂಚನೆಗಳು ಈಗಲೇ ಕಾಣುತ್ತಿದೆ. ಘೋಟ್ನೇಕರ್ ತಮ್ಮ ಮೇಲೆ ಬೀಸಿದ ದೊಣ್ಣೆ ಹೊಡೆತ ತಪ್ಪಿಸಿಕೊಂಡು ಮಗನ ಭವಿಷ್ಯದ ಚಿಂತೆಯಲ್ಲಿದ್ದಾರೆ.
ಆದರೇ ಇಬ್ಬರು ಪ್ರಭಾವಿ ನಾಯಕರು ಒಂದೇ ಪಕ್ಷದಲ್ಲಿ ಒಟ್ಟಿಗೇ ಕೂಡಿ ಹೋಗುವ ಸಾಧ್ಯತೆ ಕಡಿಮೆಯಾಗಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಶಿರಸಿಯಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಸುನೀಲ್ ಹೆಗಡೆ ಬೆಂಬಲಿಗರು ಗೈರಾಗಿದ್ದರು.
ಇನ್ನು ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಬಿಜೆಪಿ ಒಳಜಗಳ ಆರ್.ವಿ ದೇಶಪಾಂಡೆಗೆ ಲಾಭ ತಂದುಕೊಡಲಿದೆ.
ಪಕ್ಷ ಬಿಡುವ ಚರ್ಚೆ ! ಗಾಳಿ ಸುದ್ದಿ ಜೊತೆ ಅಂಟಿಕೊಂಡ್ತು ಸತ್ಯಗಳು?
ಇನ್ನು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಸುನೀಲ್ ಹೆಗಡೆಯನ್ನು ಹಣೆಯಲು ಕಾಗೇರಿ ಎರಡು ಬೆಂಕಿ ಹಚ್ಚಿದ್ದಾರೆ.
ಆದರೇ ಈ ಬೆಂಕಿ ಒಟ್ಟಿಗೆ ಸೇರಿ ಬೇರೆ ಪಕ್ಷದ ಮನೆ ಸುಡುವ ಬದಲು ತಮ್ಮದೇ ಮನೆ ಸುಡುವ ಹಂತಕ್ಕೆ ಹೋಗಿದೆ.
ಸುನೀಲ್ ಹೆಗಡೆ, ಶಾಸಕ ಶಿವರಾಮ್ ಹೆಬ್ಬಾರ್ ಜೊತೆಯಾಗಿದ್ದಾರೆ. ಇದಕ್ಕೆ ನಿದರ್ಶನ ಅನಂತಕುಮಾರ್ ಹೆಗಡೆ ರವರ ಬ್ಯಾಂಕ್ ಉದ್ಘಾಟನೆ.
ಹೆಬ್ಬಾರ್ ಸುನೀಲ್ ಹೆಗಡೆಗೆ ಗಾಳ ಹಾಕಿ ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಿಕೊಳ್ಳಲು ಬೇಕಾದ ಸಿದ್ದತೆ ಮಾಡಿಕೊಂಡಿದ್ದಾರೆ, ಹಾಗೂ ಡಿ.ಕೆ ಜೊತೆ ಮಾತೂಕತೆ ನಡೆದಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.
ಆರ್.ವಿ ದೇಶಪಾಂಡೆ ವಯೋಸಹಜತೆಯ ನಿವೃತ್ತಿ ಪಡೆದರೇ ಸುನೀಲ್ ಹೆಗಡೆಯನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
ಇವುಗಳ ಮಧ್ಯೆ ಸುನೀಲ್ ಹೆಗಡೆ ಬಣ ಪ್ರತ್ತೇಕವಾಗಿ ಇರುವುದು ಇಲ್ಲವೇ ಮತ್ತೊಂದು ಪಕ್ಷ ಸೇರ್ಪಡೆಯಾಗುವುದು ಎಂಬ ಚರ್ಚೆಯಲ್ಲಿದೆ.
ಹೀಗಾಗಿ ಕೆಲವು ತಿಂಗಳಲ್ಲೇ ಸುನೀಲ್ ಹೆಗಡೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರೂ ಅತಿಶಯೋಕ್ತಿಯಿಲ್ಲ. ಆದರೇ ಸೂಕ್ತ ನಿರ್ಧಾರ ಆಗದೇ ಸುನೀಲ್ ಹೆಗಡೆ ಪಕ್ಷ ಬಿಡುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಹಳಿಯಾಳದ ಬಿಜೆಪಿಯಲ್ಲಿ ಎರಡು ಕೋಡುಗಳು ಎಲ್ಲಿ ತಾಗಲಿದೆ? ಕಾಗೇರಿ ಹಚ್ಚಿದ ಬೆಂಕಿ ಎಲ್ಲಿ ಸುಡಲಿದೆ ಎಂಬುದನ್ನು ಕಾದು ನೋಡಬೇಕಿದೆ.