Ankola :ಕಾರಿನಲ್ಲಿ ಸಿಕ್ಕ ಕೋಟಿ ಹಣ -21 ದಿನದ ನಂತರ ದೂರು ದಾಖಲಿಸಿದ ವಾರಸುದಾರ!
Ankola :ಕಾರಿನಲ್ಲಿ ಸಿಕ್ಕ ಕೋಟಿ ಹಣ -21 ದಿನದ ನಂತರ ದೂರು ದಾಖಲಿಸಿದ ವಾರಸುದಾರ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ತಾಲ್ಲೂಕಿನ ರಾಮನಗುಳಿ ಸಮೀಪ ಜ.28 ರಂದು ವಾರಸುದಾರರಿಲ್ಲದೆ ಪತ್ತೆಯಾಗಿದ್ದ ಕಾರು ಮತ್ತು ಅದರೊಳಗಿದ್ದ ₹1.14 ಕೋಟಿ ನಗದು ಹಣಕ್ಕೆ ವಾರಸುದಾರರು ಪತ್ತೆಯಾಗಿದ್ದಾರೆ.
ಇದನ್ನೂ ಓದಿ:-Ankola :ನಿಲ್ಲಿಸಿಟ್ಟ ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆ
ಕಾರಿನಲ್ಲಿ ಸಿಕ್ಕ ಹಣ ತಮ್ಮದು ಎಂದು ಘಟನೆ ನಡೆದ 21 ದಿನಗಳ ಬಳಿಕ ಮಹಾರಾಷ್ಟ್ರ ಮೂಲದ, ಮಂಗಳೂರಿನಲ್ಲಿ ನೆಲೆಸಿದ ಉದ್ಯಮಿ ರಾಜೇಂದ್ರ ಪವಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಜೇಂದ್ರ ಪವಾರ್ ಹೇಳಿದ್ದೇನು?
ತಮ್ಮ ಕಾರನ್ನು ಅಡ್ಡಗಟ್ಟಿದ್ದ ಅಪರಿಚಿತರ ಗುಂಪು ಮಾರಕಾಸ್ತ್ರ ತೋರಿಸಿ, ಬೆದರಿಸಿ ₹1.80 ಕೋಟಿ ನಗದು ದರೋಡೆ ಮಾಡಿದೆ.
ಕಾರಿನ ಹಿಂಭಾಗದ ಕಂಪಾರ್ಟ್‌ಮೆಂಟ್‌ನಲ್ಲಿ ಇಟ್ಟಿದ್ದ ಹಣ ಮಾತ್ರ ಸುರಕ್ಷಿತವಾಗಿದೆ ಎಂದು ಫೆ.17 ರಂದು ದೂರು ನೀಡಿದ್ದಾರೆ.
ಜ.28 ರಂದು ತನ್ನ ವ್ಯವಹಾರ ನಿಭಾಯಿಸುವ ಆಕಾಶ್ ಮತ್ತು ಚಾಲಕ ಅಬ್ದುಲ್ ಸಮದ ಅಂದುನಿ ಚಿನ್ನ ಮಾರಾಟಕ್ಕೆ ಬೆಳಗಾವಿಗೆ ತೆರಳಿದ್ದರು.

ಅಲ್ಲಿಂದ ₹2.95 ಕೋಟಿ ನಗದು ಪಡೆದು ಮರಳುವಾಗ ದರೋಡೆ ಮಾಡಿದ್ದಾರೆ.ದರೋಡೆಯಿಂದ ಶಾಕ್‌ಗೆ ಒಳಗಾಗಿದ್ದ ಇಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ದೂರು ಕೊಡಲು ವಿಳಂಬವಾಯಿತು ಎಂದು ದೂರಿನಲ್ಲಿ ಉಲ್ಲೇಕಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ತಮ್ಮ ಸುರಕ್ಷತೆ ದೃಷ್ಟಿಯಿಂದ ಹಣ ತರುವ ಕಾರಿನ ನೋಂದಣಿ ಫಲಕ ಬದಲಿಸಲಾಗಿತ್ತು ಎಂಬುದನ್ನು ದೂರುದಾರರು ಒಪ್ಪಿಕೊಂಡಿದ್ದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಘಟನೆ ನಡೆದ 21 ದಿನಗಳ ಬಳಿಕ ದರೋಡೆ ಪ್ರಕರಣ ದಾಖಲಿಸಿರುವ ಬಗ್ಗೆಯಾಗಲಿ ಮತ್ತು ನೋಂದಣಿ ಸಂಖ್ಯೆ ಬದಲಿಸಿದ್ದಕ್ಕಾಗಿ ದೂರುದಾರ ಉದ್ಯಮಿ ವಿರುದ್ಧ ಪ್ರಕರಣವನ್ನು ಅಂಕೋಲ ಪೊಲೀಸರು ದಾಖಲಿಸಿಲ್ಲ.
ಇದರಿಂದಾಗಿ ಹಲವು ಅನುಮಾನಗಳು ಮೂಡಿದ್ದು ತನಿಖೆ ನಡೆದ ನಂತರ ಸಂಪೂರ್ಣ ವಿವರ ತಿಳಿಯಲಿದೆ.