Karwar:ಕೇಣಿ ವಾಣಿಜ್ಯ ಬಂದರಿಗಾಗಿ ಮೀನುಗಾರರಿಗೆ ಹಣದ ಅಮಿಷ ,ಸುಳ್ಳು ಪ್ರಚಾರ ವಿರೋಧಿಸಿದ ಮೀನುಗಾರರು
Karwar:ಕೇಣಿ ವಾಣಿಜ್ಯ ಬಂದರಿಗಾಗಿ ಮೀನುಗಾರರಿಗೆ ಹಣದ ಅಮಿಷ ,ಸುಳ್ಳು ಪ್ರಚಾರ ವಿರೋಧಿಸಿದ ಮೀನುಗಾರರು
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲ (ankola)ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಮೀನುಗಾರರಿಗೆ ಹಣ ಹಾಗೂ ಕೊಡಿಗೆಯ ಅಮಿಷ ಒಡ್ಡಲಾಗುತಿದ್ದು , ಜೆ.ಎಸ್.ಡಬ್ಲು ಕಂಪನಿ ಮೀನುಗಾರರು ಎಂದು ಯಾರನ್ನೋ ತೋರಿಸಿ ,ಸುಳ್ಳು ಮಾಹಿತಿ ನೀಡಿ ವಿಡಿಯೋ ಪ್ರಚಾರ ಮಾಡುತ್ತಿದೆ ಎಂದು ಮೀನುಗಾರರು ವಿರೋಧಿಸಿದ್ದಾರೆ.

ಈ ಕುರಿತು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿ ಕಾರ್ಯದರ್ಶಿ ಸಂಜೀವ ಬಳೆಗಾರ ಆರೋಪಿಸಿದ್ದಾರೆ.
ಇದನ್ನೂ ಓದಿ:-Sirsi : ನಕಲಿ ತುಪ್ಪ ತಯಾರಿಕೆ ಘಟಕದ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಾಣಿಜ್ಯ ಬಂದರು ಗುತ್ತಿಗೆ ಕಂಪನಿಯು ಹಲವು ಆಮಿಷ ತೋರಿಸಿ ಸ್ಥಳೀಯರ ಮತ್ತು ಕರಾವಳಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ಕಂಪನಿಯು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವಂತೆ ಮಂಗಳೂರು ಮತ್ತು ಗೋವಾ ರಾಜ್ಯವು ಕೇವಲ ವಾಣಿಜ್ಯ ಬಂದರಿನಿಂದ ಅಭಿವೃದ್ಧಿಯಾಗಿಲ್ಲ. ಗೋವಾ ರಾಜ್ಯ ಪ್ರವಾಸೋದ್ಯಮದಿಂದ ಮತ್ತು ಮಂಗಳೂರು ಜಿಲ್ಲೆ ವೈದ್ಯಕೀಯ, ಶಿಕ್ಷಣ ಕ್ಷೇತ್ರದಿಂದ ಅಭಿವೃದ್ಧಿಯಾಗಿದೆ. ಆದರೆ, ಎರಡೂ ಕಡೆ ವಾಣಿಜ್ಯ ಬಂದರಿನಿಂದ ಮಾಲಿನ್ಯ ಹೆಚ್ಚಾಗಿ ಬಂದರುಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಹೋಗಿವೆ. ಬಂದರು ಸುತ್ತಲಿನ ಪ್ರದೇಶ ಶೋಚನೀಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:-Ankola: ಕೇಣಿಯಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಬಂದರಿನ ಅಭಿವೃದ್ಧಿ -ಮಹತ್ವದ ಮಾಹಿತಿ ಹಂಚಿಕೊಂಡ JSW ಕಂಪನಿ
ಬಂದರಿನಿಂದ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ ಎಂದು ಕಂಪನಿಯವರು ಹೇಳುತ್ತಿದ್ದಾರೆ. ಸೀಬರ್ಡ್ ಯೋಜನೆ, ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿಯಿಂದಲೂ ಜಿಲ್ಲೆ ಅಭಿವೃದ್ಧಿ ಆಗುತ್ತದೆ ಎಂದು ಅಧ್ಯಯನ ವರದಿಗಳು ಹೇಳಿದ್ದವು. ಆದರೆ, ಆಗಿದ್ದೇ ಬೇರೆ. ಈಗಲೂ ಅಧ್ಯಯನ ವರದಿ ನೆಪ ಹೇಳಿ ಬಂದರು ಮಾಡಿದರೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರವೇ ಮುಳುಗಡೆಯಾಗುತ್ತದೆ ಎಂದರು.
ಕಂಪನಿಯು ಸ್ಥಳೀಯರಲ್ಲದ ವ್ಯಕ್ತಿಗಳಿಂದ ಬಂದರು ಪರ ಹೇಳಿಕೆ ಕೊಡಿಸಿ ಪ್ರಚಾರ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಪನಿ ಹರಿಬಿಟ್ಟ ವಿಡಿಯೊದಲ್ಲಿ ಇರುವವರು ಸ್ಥಳಿಯರೇ ಅಲ್ಲ. ಹೀಗೆ ಬೇರೆ ವ್ಯಕ್ತಿಗಳಿಂದ ಹೇಳಿಕೆ ನೀಡಿ ಪ್ರಚಾರ ಮಾಡುವ ಅಗತ್ಯ ಕಂಪನಿಗೆ ಏನಿದೆ. ಕೇಂದ್ರ ಸರಕಾರದ 'ಕರಾವಳಿ ಕೊರೆತ' ಅಧ್ಯಯನ ವರದಿ ಪ್ರಕಾರ ಜಿಲ್ಲೆಯ ಕರಾವಳಿ ತೀರಗಳು ಅಪಾಯದಲ್ಲಿವೆ. ಹಾಗಿರುವಾಗ ಇರುವ ಮರಳು ತೀರವನ್ನು ಬಂದರಿಗಾಗಿ ನಾಶ ಮಾಡಲು ಹೊರಟಿರುವುದು ಖಂಡನೀಯ ಎಂದರು.
ವಾಣಿಜ್ಯ ಬಂದರುಗಳು ಯೋಜನೆಗಳು ಅತಿ ಮಾಲಿನ್ಯ ಹೊರಸೂಸುವ ಕೈಗಾರಿಕೆ ಪಟ್ಟಿಯಲ್ಲಿ ಬರುತ್ತದೆ. ಅಭಿವೃದ್ಧಿಯನ್ನು ವಿರೋಧಿಸುವುದಿಲ್ಲ. ಯಾವುದೋ ಖಾಸಗಿ ಕಂಪನಿಗಾಗಿ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ನಾಶ ಮಾಡುವುದನ್ನು ವಿರೋಧಿಸುತ್ತೇವೆ ಎಂದರು.

ಕೇಣಿ ಬಂದರು ಗುತ್ತಿಗೆ ಪಡೆದ ಕಂಪನಿಯು ಬಳ್ಳಾರಿಯಲ್ಲಿ ಜನರಿಗೆ ಜಮೀನು ಕೊಡುವುದಾಗಿ ಹೇಳಿ ಮೋಸ ಮಾಡಿದೆ ಎಂದು ಆರೋಪಿಸಿದರು.
ಇನ್ನು ಯಾವುದೇ ಕಾರಣಕ್ಕೂ ಕೇಣಿಯಲ್ಲಿ ಬಂದರು ಮಾಡಲು ಬಿಡುವುದಿಲ್ಲ. ಹೋರಾಟ ನಿರಂತರವಾಗಿ ಇರುತ್ತದೆ. ನ್ಯಾಯಾಲಯದ ಮೂಲಕವೂ ಹೋರಾಟ ನಡೆಸುತ್ತೇವೆ . ಹಲವರಿಗೆ ಹಣದ ಅಮೆಷ ತೋರಿಸಿ ತಮ್ಮ ಪರ ಮಾಡಿಕೊಳ್ಳುವ ಪ್ರಯತ್ನಕ್ಕೆ ಮೀನುಗಾರರು ಸೊಪ್ಪು ಹಾಕುವುದಿಲ್ಲ. ಅಭಿವೃದ್ಧಿಗಾಗಿ ಜಿಲ್ಲೆಯ ಕೆಲವು ನಾಯಕರು ಒಕ್ಕೂಟ ರಚಿಸಿದ್ದಾರೆ.ಅವರು ಸಹ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತು ಬರಲಿ, ಕಂಪನಿ ಪರ ಅಲ್ಲ ಎಂದು ಮೀನುಗಾರರು ತಮ್ಮ ಅಕ್ರೋಶ ಹೊರಹಾಕಿದರು.