Haliyala :ಅಂಗನವಾಡಿಯ ಲಕ್ಷಾಂತರ ಮೌಲ್ಯದ ಪೌಷ್ಟಿಕ ಆಹಾರ ಕದ್ದ ಕಾಂಗ್ರೇಸ್ ಮುಖಂಡ- ಇಬ್ಬರ ಬಂಧನ
Haliyala :ಅಂಗನವಾಡಿಯ ಲಕ್ಷಾಂತರ ಮೌಲ್ಯದ ಪೌಷ್ಟಿಕ ಆಹಾರ ಕದ್ದ ಕಾಂಗ್ರೇಸ್ ಮುಖಂಡ- ಇಬ್ಬರ ಬಂಧನ
ಹಳಿಯಾಳ : ಅಂಗನವಾಡಿಯಲ್ಲಿ ಉಚಿತವಾಗಿ ನೀಡುವ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಖರೀದಿಸಿ ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ (Haliyala) ತಹಶಿಲ್ದಾರ್ ನೇತ್ರತ್ವದ ತಂಡ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ಓರ್ವ ಪರಾರಿಯಾಗಿದ್ದಾನೆ.ಬಂಧಿತರು ಹಳಿಯಾಳದ ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪ ಗೌಡ ,ದೇಶಪಾಂಡೆ ನಗರದ ನಿವಾಸಿ ಲಕ್ಷ್ಮಣ ನಾಗಪ್ಪ ಹುನಗಂದ ರನ್ನು ಪೊಲೀಸರು ವಶಕ್ಕೆ ಪಡೆದರೇ ಕಾಂಗ್ರೆಸ್ ಮುಖಂಡ ವಿಷ್ಣು ಮಿಶಾಳಿ ಎಂಬಾತ ಪರಾರಿಯಾಗಿದ್ದಾನೆ.
ಅಂಗನವಾಡಿಯ ಪೌಷ್ಟಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ಪ್ರಕರಣದ ಕುರಿತಂತೆ ಆಹಾರ ನಿರೀಕ್ಷಕರಾದ ಸಂತೋಷ್ ಶಿವಾಜಿ ತೋಂಡಲೆ ಅವರು ಹಳಿಯಾಳ ಠಾಣೆಯಲ್ಲಿ ದೂರನ್ನು ನೀಡಿದ್ದರು.
ಕಾವಲವಾಡದ ನಿವಾಸಿ ವಿಷ್ಣು ಮಿಶಾಳಿ ಮತ್ತು ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪ ಗೌಡ ಇಬ್ಬರು ಸೇರಿಕೊಂಡು ಕರ್ನಾಟಕ ಸರಕಾರದಿಂದ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಪೂರೈಕೆಯಾಗುವ ಹಾಲಿನ ಪುಡಿ ಮತ್ತು ಪುಷ್ಟಿ ಪುಡಿಗಳ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಖರೀದಿ ಮಾಡಿಕೊಂಡು, ಕೆಎ: 65/0057 ನೋಂದಣಿ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ ನಿವಾಸಿಯಾಗಿರುವ ಚಾಲಕ ಲಕ್ಷ್ಮಣ ನಾಗಪ್ಪ ಹುನಗುಂದ ಈತನು ಯಾವುದೇ ಪಾಸ್ ಅಥವಾ ಪರವಾನಿಗೆಯನ್ನು ಪಡೆದುಕೊಳ್ಳದೆ ಸಾಗಾಟ ಮಾಡಿಕೊಂಡು ಬಂದು ಬಿ.ಕೆ ಹಳ್ಳಿ ಸರ್ವೆ ನಂಬರ್ 23ರಲ್ಲಿನ ಸಹದೇವ ರುದ್ರಪ್ಪಗೌಡ ಇವರ ಹೊಲದ ದನದ ಕೊಟ್ಟಿಗೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡುವ ಸಮಯದಲ್ಲಿ ಈ ದಾಳಿ ನಡೆದಿದೆ.
ಇದನ್ನೂ ಓದಿ:-Haliyala :ಸಾಲ ತೀರಿಸಿದರೂ ಕಾಲಿ ಚಕ್ ತೋರಿಸಿ ಮಂಚಕ್ಕೆ ಕರೆದ ಮೀಟರ್ ದಂಧೆಕೋರರ ಬಂಧನ.
ದಾಳಿಯಲ್ಲಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್,ಆಹಾರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು ದಾಳಿಯ ಸಂದರ್ಭದಲ್ಲಿ ಹಾಲಿನ ಪುಡಿ ತುಂಬಿದ 35 ಚೀಲಗಳು 1270.7 ಕೆಜಿ, ಅಂದಾಜು ಇದರ ಮೌಲ್ಯ ರೂ.1,52,400/-, ಅಂಗನವಾಡಿ ಮಕ್ಕಳಿಗೆ ಪೂರೈಕೆಯಾಗುವ ಪುಷ್ಠಿ ಹೆಸರಿರುವ 205.4 ಕೆ.ಜಿ ತೂಕವನ್ನು ಹೊಂದಿರುವ 79 ಪ್ಯಾಕೆಟ್ ಗಳು ರೂ.20,500/- ಅಂದಾಜು ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಅಂಗನವಾಡಿಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಗುತ್ತಿಗೆ ಪಡೆದಿರುವ, ಕಾಂಗ್ರೆಸ್ ಮುಖಂಡ ಹಾಗೂ ಕಾವಲವಾಡ ಸಹಕಾರಿ ಸಂಘದ ಅಧ್ಯಕ್ಷನಾಗಿರುವ ವಿಷ್ಣು ಮಿಶಾಳಿ ಈತನ ಬಂಧನಕ್ಕಾಗಿ ಸಿಪಿಐ ಜೈಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ ರೆಡ್ಡಿ ಅವರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.