Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ
Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ.
ಕಾರವಾರ(october 09):-ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿಯ ಸಂಸ್ಥೆಗಳ ವಿರುದ್ಧ ಬಿಗಿ ಕ್ರಮವಾಗಿ, ಬೆಂಗಳೂರು ವಲಸೆ ರಕ್ಷಣಾಧಿಕಾರಿ (Protector of Emigrants – PoE) ಕಚೇರಿ ಹಾಗೂ ಉತ್ತರ ಕನ್ನಡ ಪೊಲೀಸ್ ಇಲಾಖೆ ಸಂಯುಕ್ತವಾಗಿ ಹೋನ್ನಾವರದ ಶರಾವತಿ ವೃತ್ತದ ಬಳಿ ಇರುವ ಟ್ರಾವೆಲ್ ಟಚ್ ಟೂರ್ಸ್ ಅಂಡ್ ಟ್ರಾವೆಲ್ಸ್ (Ryan Group) ಕಚೇರಿಯಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಸ್ಥೆಯು ವಲಸೆ ಕಾಯ್ದೆ, 1983 (Emigration Act, 1983) ಉಲ್ಲಂಘಿಸಿ ಯಾವುದೇ ಮಾನ್ಯ ಪರವಾನಗಿ ಇಲ್ಲದೆ ವಿದೇಶಿ ಉದ್ಯೋಗ ನೇಮಕಾತಿ ಕಾರ್ಯಾಚರಣೆ ನಡೆಸುತ್ತಿದ್ದರೆಂದು POE ಅಧಿಕಾರಿಗಳು ತಿಳಿಸಿದ್ದಾರೆ.
Honnavar:ಹೊನ್ನಾವರದ ಆ ಹಳ್ಳಿಯಲ್ಲಿ ಮೇಯಲು ಹೋಗುವ ಗೋವುಗಳೇ ಮಾಯ !
ಈ ದಾಳಿ ಕಾರ್ಯವನ್ನು ಬೆಂಗಳೂರು ವಲಸೆ ರಕ್ಷಣಾಧಿಕಾರಿ ಅವನೀಶ್ ಶುಕ್ಲಾ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಘಟನೆಯ ಕುರಿತು ಹೋನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದು ಅನಧಿಕೃತ ನೇಮಕಾತಿ ಸಂಸ್ಥೆಗಳ ವಿರುದ್ಧ POE ಬೆಂಗಳೂರು ಕೈಗೊಂಡ ಕ್ರಮದ ಒಂದು ಭಾಗ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖೆಯಲ್ಲಿ ಸಂಸ್ಥೆಯು ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಅನೇಕ ಜನರಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವುದು ಬಹಿರಂಗವಾಗಿದೆ. ಸೆಪ್ಟೆಂಬರ್ 9, 2025 ರಂದು ಸಂಸ್ಥೆಗೆ ನೋಟಿಸ್ ನೀಡಿದರೂ, ಅವರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ
ವಿದೇಶದಲ್ಲಿ ಉದ್ಯೋಗ ಹುಡುಕುವವರು ನೇಮಕಾತಿ ಸಂಸ್ಥೆಯ ಮಾನ್ಯತೆ ಖಚಿತಪಡಿಸಿಕೊಳ್ಳಲು ಕೆಳಗಿನ ಅಧಿಕೃತ ಮಾರ್ಗಗಳನ್ನು ಬಳಸಬೇಕು ಎಂದು PoE ಬೆಂಗಳೂರು ಸಲಹೆ ನೀಡಿದೆ:
ಅಧಿಕೃತ ವೆಬ್‌ಸೈಟ್: www.emigrate.gov.in
ಇಮೇಲ್: poebengaluru@mea.gov.in
“Emigrate” ಪೋರ್ಟಲ್‌ನಲ್ಲಿ ಭಾರತದೆಲ್ಲೆಡೆ ಇರುವ ಮಾನ್ಯ ನೇಮಕಾತಿ ಸಂಸ್ಥೆಗಳ ಪಟ್ಟಿ ಹಾಗೂ ವಲಸೆ ಕಚೇರಿಗಳ ಸಂಪರ್ಕ ವಿವರಗಳನ್ನು ಪಡೆಯಬಹುದು. ದೂರುಗಳು ಅಥವಾ ನೆರವಿಗಾಗಿ ವಿದೇಶಿ ಉದ್ಯೋಗಿಗರು ಹಾಗೂ ಅವರ ಕುಟುಂಬದವರು ಪ್ರವಾಸಿ ಭಾರತೀಯ ಸೇವಾ ಕೇಂದ್ರ (PBSK) ಸಂಪರ್ಕಿಸಬಹುದು:
24×7 ಟೋಲ್-ಫ್ರೀ ಹೆಲ್ಪ್‌ಲೈನ್: 1800-11-3090
ಇಮೇಲ್: helpline@mea.gov.in
ಅನಧಿಕೃತ ನೇಮಕಾತಿ ಸಂಸ್ಥೆಗಳಿಗೆ ಎಚ್ಚರಿಕೆ
PoE ಬೆಂಗಳೂರು ಕಚೇರಿಯು “ವಿದೇಶಿ ಉದ್ಯೋಗ”, “ಸ್ಟಡಿ ಅಬ್ರಾಡ್ ಕನ್ಸಲ್ಟಂಟ್”, “ವರ್ಕ್ ಪರ್ಮಿಟ್ ಏಜೆಂಟ್” ಅಥವಾ “ವೀಸಾ ಸಲಹೆಗಾರ” ಎಂಬ ಹೆಸರಿನಲ್ಲಿ ಅನಧಿಕೃತ ನೇಮಕಾತಿ ನಡೆಸುತ್ತಿರುವ ಎಲ್ಲ ಸಂಸ್ಥೆಗಳಿಗೆ ಕಠಿಣ ಎಚ್ಚರಿಕೆ ನೀಡಿದೆ. ಇಂತಹ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸದಿದ್ದರೆ ವಲಸೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.