Karnataka |ಶಾರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಪರಿಸರ ಸಚಿವಾಲಯದಿಂದ ಬ್ರೇಕ್ !
Karnataka |ಶಾರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಪರಿಸರ ಸಚಿವಾಲಯದಿಂದ ಬ್ರೇಕ್ !
*ಪಶ್ಚಿಮಘಟ್ಟದ ಅರಣ್ಯ ನಾಶದ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಯೋಜನೆ ತಾತ್ಕಾಲಿಕ ಸ್ಥಗಿತ*
ನವದೆಹಲಿ( November9):ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಭಾಗದ ಹೊನ್ನಾವರ -ಸಾಗರ ಭಾಗ ಒಳಗೊಂಡಂತೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ 54 ಹೆಕ್ಟೇರ್ ಅರಣ್ಯ ಭೂಮಿ ವರ್ಗಾಯಿಸಲು ತಾತ್ಕಾಲಿಕ ತಡೆ ನೀಡಿದೆ.
ರಾಜ್ಯ ಸರ್ಕಾರ ಸಾಮ್ಯದ ಕೆಪಿಸಿಎಲ್ ನಿಂದ ಹೊನ್ನಾವರ ಗೇರುಸೊಪ್ಪದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹಿನ್ನಲೆಯಲ್ಲಿ ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಯನ್ನು ರೂಪಿಸಿತ್ತು.
ಈ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಆದರೇ ಈ ಯೋಜನೆ ಪರಿಸರ ಹಾನಿ ಎಂಬ ಕಾರಣಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು.
ಈ ಯೋಜನೆಗೆ ಸಂಬಂಧಿಸಿದಂತೆ ಸುಮಾರು 54 ಹೆಕ್ಟೇರ್ ಅರಣ್ಯಭೂಮಿಯನ್ನು ವರ್ಗಾಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ.
Sharavathi |ಶರಾವತಿ ಪಂಪ್ ಸ್ಟೋರೇಜ್ ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳು! ಗ್ರಾಮಸ್ತರ ಗೆರಾವ್
ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ (Forest Advisory Committee) ಅಕ್ಟೋಬರ್ 27ರಂದು 11ನೇ ಸಭೆಯನ್ನು ನಡೆಸಿತು.
ಈ ವಿಷಯವನ್ನು ಪ್ರಸ್ತಾಪಿಸಿದ ಈ ಕಮಿಟಿ ಪ್ರಸ್ತಾವಿತ ಯೋಜನೆ ಪ್ರದೇಶವು ಶಾರಾವತಿ ಪರಿಸರ ಸೂಕ್ಷ ಪ್ರದೇಶವಾಗಿದ್ದು ಅವನತಿ ಹೊಂದುತ್ತಿರುವ ಸಿಂಗಳೀಕಗಳ ಸಂರಕ್ಷಿತ ಪ್ರದೇಶ ಹೊಂದಿದೆ.
ಈ ಯೋಜನೆಯಿಂದ 15,000 ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ.ಈ ಮರಗಳಲ್ಲಿ ಬಹಳಷ್ಟು ಪಶ್ಚಿಮಘಟ್ಟದ ಸ್ಥಳೀಯ ಪ್ರಜಾತಿಗಳಿಗೆ ಸೇರಿದ ಪ್ರಾಣಿ ,ಪಕ್ಷಿಗಳಿಗೆ ನೆಲೆ ಕಲ್ಪಿಸಿದೆ.ವಿಶ್ವದಲ್ಲೇ 34 ಜೀವ ವೈವಿಧ್ಯಗಳ ಮುಖ್ಯ ಸ್ಥಾನದಲ್ಲಿ ಒಂದಾಗಿದೆ ಎಂದು ಹೇಳಿದೆ.
Sharavathi|ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಚಿವರ ಹೇಳಿಕೆ ಬೆನ್ನಲ್ಲೇ ರಸ್ತೆ ಅಗಲೀಕರಣಕ್ಕೆ ಸಮೀಕ್ಷೆ !
ಸಮಿತಿಯ ವರದಿ ಪ್ರಕಾರ ಈ ಅರಣ್ಯ ಪ್ರದೇಶವು “ಈಕೋ ಕ್ಲಾಸ್ 1 ಮತ್ತು ಈಕೋ ಕ್ಲಾಸ್ 3” ವಿಭಾಗಗಳಿಗೆ ಸೇರಿದ್ದು, ಅರಣ್ಯದ ಮರದ ಆವರಣ ದಟ್ಟತೆ ಕ್ರಮವಾಗಿ 0.5 ಮತ್ತು 0.2 ಇದೆ. ಇದು “ಟ್ರೋಪಿಕಲ್ ವೆಟ್ ಎವರ್ಗ್ರೀನ್”, “ಸೆಮಿ ಎವರ್ಗ್ರೀನ್” ಹಾಗೂ “ಶೋಲಾ ಗ್ರಾಸ್‌ಲ್ಯಾಂಡ್” ಪ್ರದೇಶಗಳಾಗಿದೆ. ಅತ್ಯಂತ ನಾಜೂಕಾದ ಮತ್ತು ಪುನಃಸ್ಥಾಪಿಸಲಾಗದ ಪರಿಸರ ವ್ಯವಸ್ಥೆಗಳನ್ನು ಇದು ಹೊಂದಿದೆ ಎಂದು ಉಲ್ಲೇಖಿಸಿದೆ.
ಈ ಪ್ರದೇಶದಲ್ಲಿ ಸಿಂಹ ಮುಖದ ಸಿಂಗಳೀಕಗಳು, ಹುಲಿ, ಚಿರತೆ, ಸ್ಲಾತ್ ಬೆರ್, ಕಾಡು ನಾಯಿಗಳು, ಕಿಂಗ್ ಕೋಬ್ರಾ, ಮಲಬಾರ್ ದೈತ್ಯ ಅಳಿಲು ಸೇರಿದಂತೆ ಅಪರೂಪದ ಹಾಗೂ ಸ್ಥಳೀಯ ಪ್ರಾಣಿ ಪ್ರಜಾತಿಗಳು ಕಂಡುಬರುತ್ತವೆ ಎಂದು ಉಲ್ಲೇಖಿಸಿದೆ.
Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
ಇತ್ತೀಚಿನ ಅರಣ್ಯ ಜೀವಿಗಳ ಜನಗಣತಿಯ ಪ್ರಕಾರ, ಶಾರಾವತಿ ಪರಿಸರ ಸೂಕ್ಷ್ಮ ಸಂರಕ್ಷಣಾ ಪ್ರದೇಶದಲ್ಲಿ 730 ಸಿಂಹ ಮುಖದ ಸಿಂಗಳೀಕಗಳು ದಾಖಲಾಗಿದ್ದು, ಈ ಯೋಜನೆಯು ಅವುಗಳ ವಾಸಸ್ಥಳ ನಾಶಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ರಾಜ್ಯ ಸರ್ಕಾರ ಯೋಜನೆಗೆ ನೀಡಲಾದ ಪರ್ಯಾಯ ಅರಣ್ಯಾಭಿವೃದ್ಧಿ (compensatory afforestation) ಸ್ಥಳವು ಈ ವಾಸಸ್ಥಳ ನಷ್ಟಕ್ಕೆ ಪರಿಹಾರವಾಗುವುದಿಲ್ಲ ಎಂದು ಹೇಳಿದೆ. “ವೆಟ್ ಎವರ್ಗ್ರೀನ್ ಅರಣ್ಯಗಳು ಅತ್ಯಂತ ಸಂಕೀರ್ಣ ಮತ್ತು ಪುನರುತ್ಪಾದನೆ ಮಾಡಲು ಕಷ್ಟಕರವಾದ ಪರಿಸರ ವ್ಯವಸ್ಥೆಗಳಾಗಿವೆ” ಎಂದು ವರದಿ ಸ್ಪಷ್ಟಪಡಿಸಿದೆ.

ಯೋಜನೆಯು ಎರಡು ಜಲಾಶಯಗಳು, 3.2 ಕಿಮೀ ಉದ್ದದ ಸುರಂಗಗಳು, 500 ಮೀ ಆಳ ಸುರಂಗ ಮತ್ತು ಅಂಡರ್‌ಗ್ರೌಂಡ್ ಬ್ಲಾಸ್ಟಿಂಗ್ ಒಳಗೊಂಡಿದೆ.
ಈ ಪ್ರದೇಶವು ಪರಿಸರ ಸೂಕ್ಷ್ಮ ವಲಯವಾಗಿದ್ದು ,ಪರಿಸರ ಸೂಕ್ಷ ಪ್ರದೇಶ ವರ್ಗ1 ಮತ್ತು -3 ನೇ ವರ್ಗವನ್ನು ಹೊಂದಿದೆ.
Uttara kannada| ಉತ್ತರ ಕನ್ನಡ ಜಿಲ್ಲೆಯ ನದಿ ನೀರು ನೇರ ಬಳಕೆಗೆ ಯೋಗ್ಯವಲ್ಲ ಯಾವುದಕ್ಕೆ ಯಾವ ಗ್ರೇಡ್ ಗೊತ್ತಾ?
ಪರಿಸರ ಸೂಕ್ಷ ವಲಯ 1ಮತ್ತು 3 ವಲಯವನ್ನು ಒಳಪಡುವುದರಿಂದ, ಬ್ಲಾಸ್ಟಿಂಗ್ ಮತ್ತು ಮಳೆಗಾಲದ ಭಾರಿ ಮಳೆಯಿಂದ ಭೂಕುಸಿತ ಹಾಗೂ ಮಣ್ಣಿನ ಕರಗುವಿಕೆ ಅಪಾಯಗಳು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ.
ಇದರಿಂದ ಪರಿಸರಕ್ಕೆ ಮಾತ್ರವಲ್ಲದೆ ಸುತ್ತಮುತ್ತಲಿನ ಮಾನವ ವಸತಿಗಳಿಗೆ ಸಹ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಅರಣ್ಯ ಉಪ ಮಹಾನಿರೀಕ್ಷಕರು (DIG of Forests) ಈ ಯೋಜನೆಯನ್ನು ಶಾರಾವತಿ ವ್ಯಾಲಿ ಸಂರಕ್ಷಣಾ ಪ್ರದೇಶದಲ್ಲಿರುವ ಕಾರಣದಿಂದ “ಶಿಫಾರಸು ಮಾಡಿಲ್ಲ” ಎಂದು ವರದಿ ತಿಳಿಸಿದೆ.
ಅದೇ ರೀತಿ ಕರ್ನಾಟಕದ ಮುಖ್ಯ ಅರಣ್ಯ ಜೀವ ಸಂರಕ್ಷಣಾಧಿಕಾರಿ (Chief Wildlife Warden) ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯೋಜನೆ ಜಾರಿಗೆ ಬಂದರೆ “ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಭಾರೀ ಹಾನಿ” ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ಸಮಿತಿಯು ಈ ಹೇಳಿಕೆಯನ್ನು ಉಲ್ಲೇಖಿಸಿ, “ಯೋಜನೆಯ ಆರ್ಥಿಕ ಲಾಭಕ್ಕಿಂತ ಪರಿಸರ ಹಾನಿಯ ಪರಿಣಾಮಗಳು ತುಂಬಾ ಹೆಚ್ಚಿನದ್ದು” ಎಂದು ಹೇಳಿದೆ.
Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
ಯೋಜನೆಯು ಅರಣ್ಯ ಕಾಯ್ದೆ 1980 (Forest Conservation Act) ಉಲ್ಲಂಘನೆಯಾಗಲಿದೆ ಎಂದು ಹೇಳಿದೆ.
ಅರಣ್ಯ ಸಲಹಾ ಸಮಿತಿ (FAC) ರಾಜ್ಯ ಸರ್ಕಾರಕ್ಕೆ ಸೂಚನೆ:-
ಯೋಜನೆಯಲ್ಲಿ ಮರಗಳ ಕಟಾವು ಸಂಪೂರ್ಣ ತಪ್ಪಿಸಲು ಅಥವಾ ಅತೀ ಅಗತ್ಯ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸಲು ಕ್ರಮ ಕೈಗೊಳ್ಳಬೇಕು.
ಜೊತೆಗೆ, ಯೋಜನೆಯ ವಿನ್ಯಾಸವನ್ನು ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಯ ಸಲಹೆ ಪಡೆಯುವ ಮೂಲಕ ಹಾಗೂ ಅನುಮೋದಿತ ವನ್ಯಜೀವಿ ನಿರ್ವಹಣಾ ಯೋಜನೆ (Wildlife Management Plan) ಅನುಸಾರ ಅಂತಿಮಗೊಳಿಸಬೇಕು ಎಂದು ನಿರ್ದೇಶಿಸಿದೆ.
ವಿಸ್ತೃತ ಚರ್ಚೆಯ ನಂತರ, ಸಮಿತಿಯು ಈ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ಮುಂದೂಡಿ, ರಾಜ್ಯ ಸರ್ಕಾರ ಹಾಗೂ ಯೋಜನೆ ಪ್ರಾಯೋಜಕರಿಂದ ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣಗಳನ್ನು ಕೇಳಿದೆ.
ಅರಣ್ಯ ಸಲಹಾ ಸಮಿತಿಯು ರಾಜ್ಯ ಸರ್ಕಾರ ಮತ್ತು ಯೋಜನೆ ಪ್ರಾಯೋಜಕರಿಂದ ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟೀಕರಣಗಳನ್ನು ಕೇಳಿದ್ದು, ಯೋಜನೆಯ ಅನುಮತಿಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.ಈ ಮೂಲಕ ಈಗ ಪ್ರಸ್ತಾಪವಾಗಿರುವ ಯೋಜನೆಯ ರೂಪರೇಷಗಳನ್ನು ಬದಲಿಸಬೇಕಿದ್ದು , ಅತೀ ಕಡಿಮೆ ಮರ ಕಡಿತ, ಪರಿಸರ ಸೂಕ್ಷ್ಮ ವಲಯ ರಕ್ಷಣೆ ಸೇರಿದಂತೆ ಅಪರೂಪದ ಸಿಂಗಳೀಕಗಳ ರಕ್ಷಣೆ ಕುರಿತು ಯೋಜನೆಯ ನಕ್ಷೆ ಬದಲಿಸಬೇಕಿದ್ದು ರಾಜ್ಯ ಸರ್ಕಾರ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
