Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ!
Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ!
ಕಾರವಾರ :-ದೇವರುಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವರಿಗೆ (God)ಬೀಡಿ, ಸಿಗರೇಟು ಹಾಗೂ ಹೆಂಡವೇ ನೈವೇದ್ಯ ಅರ್ಪಣೆ ಮಾಡುತ್ತಾರೆ.ಹರಕೆ ಕಟ್ಟಿಕೊಳ್ಳುತ್ತಾರೆ. ಕ್ಯಾಂಡಲ್ ಬೆಳಗುತ್ತಾರೆ. ಹಿಂದು,ಕ್ರಿಶ್ಚಿಯನ್,ಮುಸ್ಲಿಂ ಎನ್ನದೇ ಎಲ್ಲಾ ಜನಾಂಗದ ಭಕ್ತರು ಈ ದೇವರ ದರ್ಶನ ಮಾಡುತ್ತಾರೆ. ಸರ್ವ ಧರ್ಮದ ಸಮನ್ವಯ ಕಾಪಾಡುವ ಈ ವಿಶೇಷ ದೇವರು ಇರೋದಾದ್ರೂ ಎಲ್ಲಿ ಅಂತೀರಾ ಈ ಸ್ಟೋರಿ ಓದಿ.
ದೇವರಿಗಿ ಹರಕೆ ರೂಪದಲ್ಲಿ ಕೋಳಿ, ಸಿಗರೇಟು,ಮದ್ಯದ ಬಾಟಲು.ಭಕ್ತಿಯಿಂದ ದೇವರಿಗೆ ಅರ್ಪಿಸಿ ಪೂಜೆ ಗೈಯುವ ಭಕ್ತರು, ಈ ವಿಶೇಷ ದೇವರು ಇರೋದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಕಾಳಿ ಸಂಗಮದಲ್ಲಿ. ಈ ದೇವರ ಹೆಸರು ಕಾಪ್ರಿ ದೇವ (Kapri temple)ಎಂದು.

ಮದ್ಯ ಪ್ರಿಯ ದೈವ ಎಂದೇ ಪ್ರಸಿದ್ಧವಾಗಿರುವ ಈ ದೇವರು ಸರ್ವ ಜನಾಂಗದ ಆರಾಧ್ಯ ದೈವ. ಈ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು ಬ್ರಿಟೀಷರ ಕಾಲದಲ್ಲಿ ಗುಲಾಮನಾಗಿ ಬಂದ ಕಾಪ್ರಿ ಎಂಬ ವಿದೇಶಿ ಪ್ರಜೆ ಕಾರವಾರದ ಕಾಳಿ ನದಿ ಸಂಗಮದಲ್ಲಿ ನೆಲೆ ನಿಲ್ಲುತ್ತಾನೆ.
ಮೂಲತಹಾ ಕ್ರಿಶ್ಚಿಯನ್ ಆಗಿದ್ದರೂ ,ಎಲ್ಲಾ ಧರ್ಮವನ್ನು ಈತ ಮೈಗೂಡಿಸಿಕೊಂಡಿದ್ದನಂತೆ. ಕಾಳಿ ನದಿ ಸಂಗಮದಲ್ಲಿ ಈತ ಬಡವರಿಗೆ ಸಹಾಯ ಮಾಡುತ್ತಾ ,ಯೋಗ ಧ್ಯಾನವನ್ನು ಮಾಡುತ್ತಾ ಇದ್ದನಂತೆ.ಇದಲ್ಲದೇ ಈತ ಮದ್ಯಕುಡಿಯುವ ಜೊತೆ ಸಿಗರೇಟು ಸಹ ಸೇದುತಿದ್ದನು. ಇಷ್ಟಾರ್ಥ ನೆರವೇರಿಸುವ ಈತನನ್ನು ಕಂಡು ಆಶಿರ್ವಾದ ಬೇಡುವ ಜನ ಮದ್ಯ,ಸಿಗರೇಟು ನೀಡುತಿದ್ದರು.
ಒಂದು ದಿನ ಈತ ಮೃತಪಟ್ಟಿದ್ದು, ನಂತರ ಇದೇ ಭಾಗದ ಓರ್ವನ ಕನಸಿನಲ್ಲಿ ಬಂದು ತನಗೊಂದು ದೇವಾಲಯ ಕಟ್ಟಬೇಕು ಅಲ್ಲಿ ನಾನು ನೆಲಸುತ್ತೇನೆ ಎಂದರಂತೆ. ಇದರ ತರುವಾಗ ಆತ ಇದ್ದ ಕಾಳಿ ಸಂಗಮದಲ್ಲೇ ದೇವಾಲಯ ನಿರ್ಮಾಣ ಮಾಡಿದ್ದು ತೊಂದರೆ ಎಂದು ಹರಕೆ ಕಟ್ಟಿಕೊಳ್ಳುವ ಜನರು ಇಲ್ಲಿಗೆ ಬಂದು ಮದ್ಯ ,ಸಿಗರೇಟು ,ಕೋಳಿ ಹರಕೆ ಕಟ್ಟಿಕೊಂಡು ಹರಕೆ ತೀರಿದ ನಂತರ ಕಾಪ್ರಿ ದೇವನಿಗೆ ಸಮರ್ಪಿಸುತ್ತಾರೆ.
ಈತ ಕ್ರಿಶ್ಚಿಯನ್ ಆದ್ದರಿಂದ ದೇವಸ್ಥಾನದ ಮುಂಭಾಗ ಕ್ಯಾಂಡಲ್ ಬೆಳಗಿಸುತ್ತಾರೆ. ಇದಲ್ಲದೇ ಕೋಳಿ,ಕುರಿಯನ್ನು ಸಹ ನೀಡುತ್ತಾರೆ .

ಗೋವಾ ,ಮಹಾರಾಷ್ಟ್ರದಿಂದ ಈ ದೇವರ ದರ್ಶನ ಪಡೆಯಲು ಇಲ್ಲಿಗೆ ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ಎರಡು ದಿನ ನಡೆಯುವ ಜಾತ್ರೆಗೆ ಭಕ್ತರು ಬಂದು ಹರಕೆ ತೀರಿಸುತ್ತಾರೆ. ನನಗೆ ಕ್ಯಾನ್ಸರ್ ಇತ್ತು,ಗುಣಮುಖವಾಗಲು ಈ ದೇವರಲ್ಲಿ ಹರಕೆ ಕಟ್ಟಿಕೊಂಡೆ ನಂತರ ಗುಣವಾಯ್ತು ಎನ್ನುತ್ತಾರೆ ಒಳಿತು ಕಂಡ ಭಕ್ತೆ ಪುಷ್ಟ ಎನ್ನುವವರು. ಇದಲ್ಲದೇ ಈ ದೈವದಿಂದ ಒಳಿತು ಕಂಡ ಭಕ್ತರು ಹಲವರಿದ್ದು ಪ್ರತಿ ವರ್ಷ ಮಾರ್ಚ ನಲ್ಲಿ ನಡೆಯುವ ಜಾತ್ರೆಯಲ್ಲಿ ಬಂದು ಪೂಜೆ ಗೈದು ತೆರಳುತ್ತಾರೆ.
ಇನ್ನು ಮದ್ಯ ಪ್ರಿಯ ಎಂದೇ ಪ್ರಸಿದ್ಧಿ ಪಡೆದ ಕಾಪ್ರಿ ಎಂಬ ವ್ಯಕ್ತಿ ದೈವವಾಗಿ ಕಾಳಿ ನದಿ ತೀರದಲ್ಲಿ ಎಲ್ಲಾ ಧರ್ಮದವರಿಂದ ಪೂಜೆಗೈಯಿಸಿಕೊಳ್ಳುತಿದ್ದಾನೆ.
ಗುಲಾಮನಾಗಿ ಭಾರತಕ್ಕೆ ಬಂದ ಈತ ತನ್ನ ಒಳ್ಳೆತನ,ಸೇವಾ ಮನೋಭಾವ ದಿಂದ ಜನರ ಮನಸ್ಸು ಗೆಲ್ಲುವ ಮೂಲಕ ಸಾಮಾನ್ಯನಾದ ಗುಲಾಮನೊಬ್ಬ ಮೃತನಾದ ನಂತರ ದೈವದ ಸ್ಥಾನಕ್ಕೆ ಏರಿದ್ದು ನಿಜವಾಗಿಯೂ ಅದ್ಬುತ ಎನ್ನಬಹುದಾಗಿದೆ.
ಇದನ್ನೂ ಓದಿ:-Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ
ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ರಸ್ತೆಯಲ್ಲಿ ಸಂಚರಿಸುವ ಜನ ಇಲ್ಲಿ ಪೂಜೆ ಗೈದು ಸಾಗುತ್ತಾರೆ. ಕಾಳಿ ನದಿಯ ಸೇತುವೆಯನ್ನು ಕಾಯುವ ಶಕ್ತಿ ಎಂದು ಇಲ್ಲಿನ ಜನ ನಂಬಿದ್ದು ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಪಾಡುತ್ತಾನೆ ಎಂಬ ನಂಬಿಕೆ ಸ್ಥಳೀಯರದ್ದಾಗಿದ್ದು ,ಈ ಹಿಂದೆ ಸೇತುವೆ ಕುಸಿದು ಬಿದ್ದಾಗ ಯಾರಿಗೂ ಏನೂ ಆಗದಂತೆ ಕಾಯ್ದಿದ್ದಾನೆ ಎನ್ನುತ್ತಾರೆ ಇಲ್ಲಿನ ದೇವಸ್ಥಾನದ ಅರ್ಚಕ ವಿನಾಯಕ್.
ಒಳಿತು ಮಾಡುವ ಗುಣವಿದ್ದರೇ ಸಾಮಾನ್ಯನೂ ದೈವವಾಗುತ್ತಾನೆ ಎಂಬುದಕ್ಕೆ ಈ ಕಾಪ್ರಿ ದೇವ ಸಾಕ್ಷಿಯಾಗಿದ್ದಾನೆ. ಸರ್ವ ಧರ್ಮ ಸಮಾನತೆಯ ಸಾಕ್ಷಿಯಾಗಿ ಈ ಕಾಪ್ರಿ ದೇವ ಕಾರವಾರದಲ್ಲಿ ನೆಲೆ ನಿಂತಿದ್ದು ,ಭಕ್ತರು ಸಂಕಷ್ಟಗಳನ್ನು ನಿವಾರಿಸುವ ಶಕ್ತಿಯಾಗಿ ಬೆಳೆದಿದ್ದು ,ಮದ್ಯ,ಸಿಗರೇಟು ದೈವ ವೆಂದೇ ಪ್ರಸಿದ್ದಿಪಡೆಯುವ ಮೂಲಕ ಜನರನ್ನು ತನ್ನತ್ತ ಸೆಳೆಯುತಿದ್ದಾನೆ.