Karwar | ಹಣಕೋಣ ಉದ್ಯಮಿ ಹತ್ಯೆ -ಪ್ರಮುಖ ಆರೋಪಿ ಆತ್ಮಹತ್ಯೆ ಮೂವರ ಬಂಧನ
ಕಾರವಾರ :- ಕಾರವಾರದ ಹಣಕೋಣ ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದರೇ ಪ್ರಮುಖ ಆರೋಪಿ ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬದಲ್ಲಿನ ದ್ವೇಷಕ್ಕೆ ಎರಡು ಜೀವಗಳು ಬಲಿಯಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿ ಪುಣೆಯ ಉದ್ಯಮಿಯ ಭೀಕರ ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಭೇಟೆಯಾಡಿದೆ.
ಬಿಹಾರದ ಮೆಹೆಂದರ್ ಪುರ್ ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂ ನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಆರೋಪಿಗಳಾದರೇ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಘಟನೆ ಏನು?
ಪುಣಿಯ ಉದ್ಯಮಿ ವಿನಾಯಕ ನಾಯ್ಕ ಹಾಗೂ ಗೋವಾದ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಹಾ ಕಾರವಾರದವರಾಗಿದ್ದು ಇಬ್ಬರೂ ಸಂಬಂಧಿಕರಾಗಿದ್ದರು. ಆದರೇ ಕೌಟುಂಬಿಕ ಕಲಹ ಇಬ್ಬರ ದಾಂಪತ್ಯ ಕೆಡುವಂತೆ ಮಾಡಿತ್ತು. ಇದಲ್ಲದೇ ವಿನಾಯಕ್ ನಾಯ್ಕ ಪತ್ನಿ ವೃಷಾಲಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿದ್ದು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಯಾಗಿತ್ತು.
ಆದರೇ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆಯ ಬದುಕನ್ನ ಹಾಳುಗೆಡಿಸಿತ್ತು. ಹೀಗಾಗಿ ಕಳೆದ ಆರು ತಿಂಗಳಿಂದ ತನ್ನ ಬಂಟರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದು, ತಾಯಿಯ ಶ್ರಾದ್ಧ ಹಾಗೂ ಊರಿನ ದೇವರ ಉತ್ಸವಕ್ಕೆ ಆಗಮಿಸಿದ್ದ ವಿನಾಯಕ್ ನಾಯ್ಕ ಮರಳಿ ಪುಣೆಗೆ ತೆರಳಲು ಸಿದ್ದರಾಗಿದ್ದಾಗ ಸೆಪ್ಟೆಂಬರ್ 22 ಭಾನುವಾರ ಮುಂಜಾನೆ ಷಿಫ್ಟ್ ಕಾರಿನ ಮೂಲಕ ಬಂದ ಮೂರು ಜನ ಮುಸುಕುದಾರಿಗಳು ಮನೆಗೆ ನುಗ್ಗಿ ಮಚ್ಚು ಮತ್ತು ರಾಡ್ ನಿಂದ ವಿನಾಯಕ್ ನಾಯ್ಕ ಹತ್ಯೆ ಮಾಡಿ ತಡೆಯಲು ಬಂದ ಆತನ ಪತ್ನಿ ವೃಷಾಲಿ ಗೆ ತಲೆಗೆ ರಾಡ್ ನಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇದೀಗ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೌಟುಂಬಿಕ ಕಲಹ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್. ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ವಯುಕ್ತಿಕ ಕುಟುಂಬ ಕಲಹ ಉದ್ಯಮಿಯೊಬ್ಬನ ಹತ್ಯೆಗೆ ಕಾರಣವಾದರೇ ಹತ್ಯೆ ಮಾಡಿಸಿದ ಪ್ರಮುಖ ಆರೋಪಿ ಆತ್ಮಹತ್ಯೆ ಯಲ್ಲಿ ಕೊನೆಗೊಂಡಿದ್ದು ಮಾತ್ರ ದುರಂತ.