Uttara kannada| ಜಿಲ್ಲೆಯಲ್ಲಿ ಏನು ಸುದ್ದಿ? ವಿವರ ನೋಡಿ.
Uttara kannada| ಜಿಲ್ಲೆಯಲ್ಲಿ ಇಂದು ಏನು ಸುದ್ದಿ? ವಿವರ ನೋಡಿ.
ಶಿರಸಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
ಶಿರಸಿಯ (sirsi) ಗಾಂಧಿನಗರ ಸಂಪಿಗೆ ಕೆರೆ ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿ ಅಂದಾಜು 3 ಲಕ್ಷ ರೂಪಾಯಿಗಳಿಗೂ ಅಧಿಕ ಗೃಹಪಯೋಗಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ರೇಷ್ಮಾ ಸೈಮನ್ ಡಿಸೋಜಾ ಎಂಬವರ ಮನೆಗೆ ಗುರವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಅಂದಾಜಿಸಲಾಗಿದೆ. ರೇಷ್ಮಾ ಕುಟುಂಬದವರು ಬಡವರಾಗಿದ್ದು, ಸಂಸಾರ ಸಾಗಲು ಅವಶ್ಯವಾದ ಗೃಹೋಪಯೋಗಿ ವಸ್ತುಗಳೇ ಸುಟ್ಟು ಕರಕಲಾಗಿದೆ. ಇದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿ ಕುಟುಂಬವಿದೆ.
ಶಿರಸಿ: ಶಿಷ್ಯರಿಗೆ ಹಸಿರು ಮಂತ್ರಾಕ್ಷತೆ ನೀಡಿದ ಸ್ವರ್ಣವಲ್ಲೀ ಶ್ರೀ.
Sirsi:- ಬೇಡ್ತಿ ಹಾಗೂ ಅಘನಾಶಿನಿ ನದಿಗಳ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಳ್ಳುವ ಮೂಲಕ ಹಸಿರು ಪ್ರೀತಿ ಸ್ವಾಮೀಜಿ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶರು ಶಿಷ್ಯರಲ್ಲಿ ಚಾತುರ್ಮಾಸ್ಯ ಅವಧಿಯಲ್ಲೂ ಪರಿಸರ ಜಾಗೃತಿ ಕಾರ್ಯ ಮುನ್ನಡೆಸುತ್ತಿದ್ದಾರೆ. ವನಸ್ಪತಿ ಗಿಡಗಳ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯ, ಭಕ್ತರಲ್ಲಿ ಕೂಡ ಆಸಕ್ತಿ ಹೆಚ್ಚಿಸಲು ಮುಂದಾಗಿದ್ದಾರೆ. ಕೇವಲ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದೇ ಸ್ವತಃ ಗಿಡಗಳನ್ನೂ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶಿಷ್ಯರಿಗೆ ನೀಡುತ್ತಿದ್ದಾರೆ.
ಕುಮಟಾ: ಕಸ್ಟಮ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನ ದರೋಡೆ.

ಮಂಗಳೂರಿನಿಂದ ಕುಮಟಾಗೆ ತೆರಳುತ್ತಿದ್ದ ಕೇರಳ ಮೂಲದ ಹರಿ ಭಾನುದಾಸ್ ಎಂಬುವವರಿಂದ 350 ಗ್ರಾಂ ಚಿನ್ನವನ್ನು ಕಸ್ಟಮ್ ಅಧಿಕಾರಿಗಳೆಂದು ನಂಬಿಸಿ ಆರು ಮಂದಿ ದುಷ್ಕರ್ಮಿಗಳು ಆಗಸ್ಟ್ 13ರಂದು ದರೋಡೆ ಮಾಡಿದ್ದಾರೆ. ದುಷ್ಕರ್ಮಿಗಳು ಹರಿ ಭಾನುದಾಸ್ ಅವರನ್ನು ಬೆದರಿಸಿ ಇನ್ನೋವಾ ಕಾರಿನಲ್ಲಿ ಕರೆದೊಯ್ದು, ಶಿರಸಿ-ಕುಮಟಾ ರಸ್ತೆಯ ಅಂತರವಳ್ಳಿ ಕಾಡಿನಲ್ಲಿ ಇಳಿಸಿ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋಕರ್ಣ: ಸಾಣಿಕಟ್ಟಾ ಬಳಿ ಧರೆ ಕುಸಿತ.

ರಾಜ್ಯ ಹೆದ್ದಾರಿ 143ರ ಸಾಣಿಕಟ್ಟಾ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ 4 ಗಂಟೆ ನಂತರ ಭಾರಿ ಪ್ರಮಾಣದಲ್ಲಿ ಧರೆ ಕುಸಿತ ಸಂಭವಿಸಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕಾಯುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ವಾರಕ್ಕೂ ಹೆಚ್ಚು ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಿದ್ದು, ಭೂ ಕುಸಿತಕ್ಕೆ ಕಾರಣವಾಗಿದೆ. ರಸ್ತೆಗೆ ಮಣ್ಣು ಆವರಿಸಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.