Uttara kannada | ಮುಖ್ಯಮಂತ್ರಿಗಳು ಬಾರದೇ ಉದ್ಘಾಟನೆ ಇಲ್ಲ .-ಆರು ತಿಂಗಳಿಂದ ಬಾಗಿಲು ಹಾಕಿದೆ ಹೊಸ ಜಿಲ್ಲಾಸ್ಪತ್ರೆ
Uttara kannada | ಮುಖ್ಯಮಂತ್ರಿಗಳು ಬಾರದೇ ಉದ್ಘಾಟನೆ ಇಲ್ಲ .-ಆರು ತಿಂಗಳಿಂದ ಬಾಗಿಲು ಹಾಕಿದೆ ಹೊಸ ಜಿಲ್ಲಾಸ್ಪತ್ರೆ

ಕಾರವಾರ:- ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಹೋರಾಟ ದಶಕಗಳದ್ದು , ಹೀಗಿರುವಾಗ ಹಿಂದಿನ ಸರ್ಕಾರ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ಹಣ ನೀಡಿ ಕಟ್ಟಡವೂ ಆಗಿದೆ.ಆದ್ರೆ ಆಸ್ಪತ್ರೆಗೆ ಬೇಕಾದ ವಸ್ತು ಖರೀದಿಗೆ ಹಣವಿಲ್ಲ, ಇತ್ತ ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಟಕ್ಕೆ ಬಿದ್ದಿದ್ದು ಆರು ತಿಂಗಳಿಂದ ಆಸ್ಪತ್ರೆ ಸಾರ್ವಜನಿಕರ ಅನುಕೂಲಕ್ಕೆ ಬಾರದೆ ಪಾಳು ಬಿದ್ದಿದೆ.
ಕಳೆದ ಒಂದು ದಶಕದಿಂದ ಉತ್ತರ ಕನ್ನಡ (uttara Kannada) ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ದೊಡ್ಡ ಅಭಿಯಾನಗಳೇ ನಡೆದುಹೋದವು. ಸುಸಜ್ಜಿತ ಆಸ್ಪತ್ರೆ ಇಲ್ಲದೇ ಜನ ಗೋವಾ, ಉಡುಪಿ,ಮಂಗಳೂರಿಗೆ ಹೋಗುವ ಸ್ಥಿತಿಗಳಿವೆ.ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಸೂಕ್ತ ಸಂಧರ್ಭದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪುವವರ ಸಂಖ್ಯೆ ಮಾತ್ರ ದಿನೇ ದಿನೇ ಏರುತ್ತಲೇ ಇರುತ್ತದೆ. ಇದರ ನಡುವೆ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಮ್ಮ ಸರ್ಕಾರ ಬಂದರೆ ನಿರ್ಮಿಸಿಯೇ ನಿರ್ಮಿಸುತ್ತೇವೆ ಎಂದಿದ್ದರು.
ಆದರೆ ಸರ್ಕಾರ ಬಂದು ಎರಡು ವರ್ಷವಾದರು ಈ ವರೆಗೆ ಆಸ್ಪತ್ರೆ ನಿರ್ಮಿಸಿಲ್ಲ. ಇನ್ನು ಕಳೆದ ಬಿಜೆಪಿ ಸರ್ಕಾರದಲ್ಲಿ ಕಾರವಾರದಲ್ಲಿ ಸುಮಾರು 150 ಕೋಟಿ ವೆಚ್ಚದ 450 ಬೆಡ್ ಆಸ್ಪತ್ರೆ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಕಟ್ಟಡ ಕಾಮಗಾರಿ ಮುಗಿದು 6 ತಿಂಗಳುಗಳೇ ಕಳೆದಿದೆ. ಆದರೆ ಈ ವರೆಗೆ ಕಟ್ಟಡದ ಉದ್ಘಾಟನೆ ಮಾತ್ರ ಮಾಡಿಲ್ಲ. ಇರುವ ಶಿಥಿಲಗೊಂಡ ಹಳೆಯ ಕಟ್ಟಡದಲ್ಲಿಯೇ ಜಿಲ್ಲಾ ಆಸ್ಪತ್ರೆ ನಡೆಸಲಾಗುತಿದ್ದು ಮಳೆ ಬಂದರೇ ಸೋರುತ್ತದೆ .

ಇನ್ನು ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾದರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಮಾಡಿಲ್ಲ, ಅತ್ತ ಹೊಸ ಆಸ್ಪತ್ರೆ ಕಟ್ಟಡವನ್ನೂ ಉದ್ಘಾಟಿಸದೇ ನಿರ್ಲಕ್ಷ ವಹಿಸಿದ್ದು ಐಸಿಯೂ ಸಹ ಸಮರ್ಪಕವಾಗಿ ಇಲ್ಲ ಹೀಗಿರುವಾಗ ಇರುವ ಹೊಸ ಆಸ್ಪತ್ರೆಯನ್ನು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡದ ಬಗ್ಗೆ ಬಿಜೆಪಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಕಿಡಿ ಕಾರಿದ್ದಾರೆ.
ಇದನ್ನೂ ಓದಿ:-Karwar|ಅನಾರೋಗ್ಯದ ನಡುವೆಯೇ ಮನೆಗೆ ಬಂದ ಶೈಲ್ ಗೆ ಇಡಿ ಮತ್ತೊಂದು ಶಾಕ್ !
ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಿಸಿ 25 ವರ್ಷಗಳೇ ಕಳೆದಿದ್ದು ಕರಾವಳಿ ಭಾಗ ಆಗಿರುವುದರಿಂದ ಕಟ್ಟಡ ಶಿಥಿಲಾವಸ್ಥಗೆ ಬಂದಿದೆ. ಈ ಹಿನ್ನಲೆಯಲ್ಲಿ 150 ಕೋಟಿ ಹಣವನ್ನ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದು ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡದ ಒಳಗೆ ಆಸ್ಪತ್ರೆಗೆ ಬೇಕಾದ ವಸ್ತು ಖರೀದಿ, ಎಸ್ ಟಿ ಪಿ ಪ್ಲ್ಯಾಂಟ್ ಮಾಡಲು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಈ ವರಗೆ ಉದ್ಘಾಟನೆ ಮಾಡಿಲ್ಲ ಎನ್ನುವ ಆರೋಪವಿದೆ. ಇನ್ನು ಈ ಹೊಸ ಕಟ್ಟಡವನ್ನು ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಆರು ತಿಂಗಳಿಂದ ಕಟ್ಟಡ ಪಾಳು ಬಿದ್ದಿದ್ದು ಜನರ ಉಪಯೋಗಕ್ಕೆ ಬಾರದಂತಾಗಿದೆ.
ಇನ್ನು ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡುತ್ತಾರೆ ಅವರ ಸಮಯಕ್ಕಾಗಿ ಕಾಯುತಿದ್ದೇವೆ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮಾತು.
ಸದ್ಯ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸಿನ ಕೂಸಾದರೇ , ಇತ್ತ ಕಟ್ಟಿದ ಆಸ್ಪತ್ರೆ ಸಚಿವರ ಹಟದಿಂದ ಆರು ತಿಂಗಳಿಂದ ನೆನೆಗುದಿಗೆಗೆ ಬಿದ್ದಿದ್ದು , ರೋಗಿಗಳ ಪರದಾಟ ಮಾತ್ರ ತಪ್ಪುತ್ತಿಲ್ಲ.
