Uttara kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವು ಕಡೆ ಹಾನಿ|ವಿವರ ನೋಡಿ.
Uttara kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವು ಕಡೆ ಹಾನಿ|ವಿವರ ನೋಡಿ.
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ. 24 ತಾಸಿನಲ್ಲಿ ಸುರಿದ ಮಳೆಯಿಂದ ಹಲವು ಕಡೆ ಹಾನಿ ಸಂಭವಿಸಿದೆ. ಮಳೆ (rain),ಗಾಳಿ ಹೊಡೆತಕ್ಕೆ ಮನೆಗಳಿಗೂ ಹಾಗೂ ರಸ್ತೆಗಳು ಹಾನಿಯಾಗಿದ್ದು ಹಲವು ಭಾಗದಲ್ಲಿ ನೀರು ನಿಂತು ಸಮಸ್ಯೆ ತಂದೊಡ್ಡಿತು.
ಯಾವ ತಾಲೂಕಿನಲ್ಲಿ ಹಾನಿ?
ಯಲ್ಲಾಪುರ: ಭಾರೀ ಮಳೆಗೆ ಕಿರು ಸೇತುವೆ ಜಲಾವೃತ
ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಗುಳ್ಳಾಪುರದಿಂದ ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಗಂಗಾವಳಿ ನದಿಗೆ ಅಡ್ಡಲಾಗಿ ಗುಳ್ಳಾಪುರದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯಲ್ಲಿ ಕೊಚ್ಚಿಹೋಗಿದೆ. ಗಂಗಾವಳಿಯಲ್ಲಿ ನೀರಿನ ಪ್ರಮಾಣ ಅಧಿಕವಾದ ಹಿನ್ನೆಲೆಯಲ್ಲಿ ಪಣಸಗುಳಿ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಅಲ್ಲಿ ಸಂಚಾರ ಸ್ಥಗಿತವಾಗಿದೆ. ವಜ್ರಳ್ಳಿ ಪಂಚಾಯಿತಿಯ ವಿವಿಧೆಡೆ ಗ್ರಾಮೀಣ ರಸ್ತೆಗಳು ನೀರಿನಿಂದ ಕೊಚ್ಚಿಹೋಗಿವೆ.
ಇದನ್ನೂ ಓದಿ:-Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ
ಭಟ್ಕಳ: ಭಾರಿ ಮಳೆಗೆ ಹಲವು ಮನೆಗಳಿಗೆ ಹಾನಿ.
ಭಟ್ಕಳ (bhatkal) ತಾಲೂಕಿನಲ್ಲಿ ಸುರಿದ ಮಳೆಗೆ ಹೆಬಳೆ ಗ್ರಾ. ಪಂ. ವ್ಯಾಪ್ತಿಯ ಹನೀಪಬಾದ ಗ್ರಾಮದ ನಿವಾಸಿ ಮಮ್ರಾಜ್ ಬೇಗಂ ಅವರ ಮನೆಯ ಗೋಡೆ ಮತ್ತು ಚಾವಣಿ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.
ಬೆಳಕೆ ಗ್ರಾಮದ ಕೊಡ್ಲಿಮನೆ ಮೊಗೇರ ಕೇರಿ ಗ್ರಾಮದ ನಿವಾಸಿ ತಿಮ್ಮಪ್ಪ ನಾರಾಯಣ ಮೊಗೇರ ಅವರ ಮನೆಯ 20 ಹಂಚು ಹಾರಿ ಹೋಗಿ ಹಾನಿಯಾಗಿದೆ. ಕೊಪ್ಪ ಆ ಗ್ರಾಮದ ಬೆಟ್ಕರ್ ನಿವಾಸಿ ಸುರೇಶ ರಾಮಕೃಷ್ಣ ಭಟ್ ಅವರ ಮನೆಯ ಚಾವಣಿ ಬಿದ್ದು ಭಾಗಶಃ ಹಾನಿಯಾಗಿದೆ.
ಹೊನ್ನಾವರ: ವರುಣನ ಅಬ್ಬರಕ್ಕೆ ಮನೆಗಳಿಗೆ ಹಾಹಾನಿ
ಹೊನ್ನಾವರ ತಾಲೂಕಿನ ಕುದ್ರಗಿ ಗ್ರಾ. ಪಂನ ಸುಕ್ರಿ ಸಾಂತ ಹಳ್ಳೆರ ಇವರ ವಾಸ್ತವ್ಯದ ಮನೆ ಕುಸಿದು ತೀವ್ರತರಹದ ಹಾನಿಯಾಗಿದೆ. ವಂದೂರು ಗ್ರಾಮದ ನಿವಾಸಿ ಮಹಾಬಲೆಶ್ವರ ವೆಂಕಟ್ರಮಣ ಹೆಗಡೆಯವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಅದೃಷ್ಟವಷಾತ್ ಈ ಎರಡು ಘಟನೆಯಲ್ಲಿ ಜನ, ಜಾನುವಾರು ಪ್ರಾಣ ಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಿದ್ದಾಪುರ-ಮೆಕ್ಕೆ ಜೋಳ ನೀರಿಗೆ ಆಹುತಿ
ಸಿದ್ದಾಪುರ ತಾಲೂಕಿನಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಸುರಿಯುತಿದ್ದು ರೈತರು ಬೆಳೆದ ಜೋಳದ ಬೆಳೆ ಮಳೆಗೆ ಸಿಲುಕಿ ಒಣಗಿಸಲಾಗದೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಮಳೆ ಶುಕ್ರವಾರವೂ ಮುಂದುವರಿದಿದ್ದು, ಸಿದ್ದಾಪುರ ತಾಲೂಕಿನ ಅರೆಂದೂರು, ಅಕ್ಕುಂಜಿ, ಕವಂಚೂರು, ಕಲ್ಲೂರು ಭಾಗದಲ್ಲಿ ಸುಮಾರು 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆ ಜೋಳ ಒಣಗಿಸಲಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಕೊಯ್ಲು ಮುಗಿದಿದ್ದು, ಟಾರ್ಪಲ್ ಮುಚ್ಚಿಡಲಾಗಿದೆ. ಇನ್ನು ಸಿದ್ದಾಪುರದ (siddapura) ಹಟ್ಟಿನಕೊಪ್ಪಳದಲ್ಲಿ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದ್ದು ನೀರು ಹೋಗಲು ವ್ಯವಸ್ಥೆ ಮಾಡಲಾಯಿತು.
ಕಾರವಾರದಲ್ಲಿ ಮಳೆ ಅಬ್ಬರ -ರಸ್ತೆ ಮೇಲೆ ಬಿದ್ದ ಮರ!
ಕಾರವಾರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದೆ.
ಕಾರವಾರದ ಕಡಲತೀರದ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮರ ಬಿದ್ದಿದ್ದು ತೆರವು ಮಾಡಲಾಗಿದೆ. ಅರಗಾ ಬಳಿ ಹೆದ್ದಾರಿ ಬಳಿ ಮರ ಬಿದ್ದು ತೆರವು ಮಾಡಲಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಸಹ ಧರೆಗುರುಳಿದೆ.