Uttara kannda ಮೇ 12 ರಂದು ಮಾಕ್ ಡ್ರಿಲ್ ಎಲ್ಲೆಲ್ಲಿ ನಡೆಯುತ್ತೆ ಗೊತ್ತಾ?
Uttara kannda ಮೇ 12 ರಂದು ಮಾಕ್ ಡ್ರಿಲ್ ಎಲ್ಲೆಲ್ಲಿ ನಡೆಯುತ್ತೆ ಗೊತ್ತಾ?

ಕಾರವಾರ:- ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ “ಆಪರೇಷನ್ ಅಭ್ಯಾಸ್” ಅಣಕು ಕಾರ್ಯಾಚರಣೆ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ.12 ರಂದು 5 ರೀತಿಯ ಅಣಕು ಕಾರ್ಯಚರಣೆಯನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಾಡಲಾಗುವುದು.
ಇದು ಅಣಕು ಕಾರ್ಯಚರಣೆ ಮಾತ್ರವಾಗಿದ್ದು ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಹೇಳಿದರು.
ಇದನ್ನೂ ಓದಿ:-Karwar :ಕರಾವಳಿಯಲ್ಲಿ “OP TRIGGER ” ಆಪರೇಷನ್-ಕಡಲಿನಲ್ಲಿ ಕಟ್ಟೆಚ್ಚರ
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಣಕು ಕಾರ್ಯಚರಣೆ ಸಂದರ್ಭದಲ್ಲಿ ಜಿಲ್ಲೆಯ ಜನತೆ ಯಾವುದೇ ರೀತಿಯ ಗಾಬರಿ, ಆತಂಕಕ್ಕೆ ಒಳಗಾಗದೇ ಸರ್ಕಾರ ನೀಡುವ ಆದೇಶವನ್ನು ಪಾಲಿಸಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು.
ಜಿಲ್ಲೆಯು ಅತ್ಯಂತ ಉದ್ದವಾದ ಕರಾವಳಿ ತೀರವನ್ನು ಹೊಂದಿರುವುದು ಮಾತ್ರವಲ್ಲದೇ ಅನೇಕ ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಈ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ನಾಗರೀಕರ ರಕ್ಷಣೆ ಮಾಡುವ ಕುರಿತಂತೆ ಬೆಂಕಿ ಅವಘಡ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಕಟ್ಟಡ ಕುಸಿತ, ಬ್ಲಾಕ್ ಔಟ್ ಚಟುವಟಿಕೆಗಳ ಅಣಕು ಕಾರ್ಯಚರಣೆ ಮಾಡಲಾಗುತ್ತದೆ ಎಂದರು.
ಮೇ. 12 ರಂದು ಮಧ್ಯಾಹ್ನ 4 ಗಂಟೆಗೆ ಬಿಣಗಾದ ಗ್ರಾಸಿಂ ಇಂಡಸ್ಟ್ರೀಯಲ್ಲಿ ಕಟ್ಟಡ ಕುಸಿತ ಸಂಭವಿಸಿದಾಗ ಯಾವ ರೀತಿ ಜನರನ್ನು ರಕ್ಷಣೆ ಮಾಡಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಹಾಗೂ ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತಂತೆ, ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಗ್ರಾಸಿಂ ಟೀಮ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಅಣಕು ಕಾರ್ಯಚರಣೆ ಮಾಡಲಾಗುವುದು. ಹಾಗೂ ನೌಕಾನೆಲೆ ಬಳಿಯ ಅಮದಹಳ್ಳಿ ಸಿವಿಲ್ ಕಾಲೋನಿಯಲ್ಲಿ ಸಂಜೆ 5 ಗಂಟೆಗೆ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಜನರನ್ನು ರಕ್ಷಿಸಿ, ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಕುರಿತಂತೆ ಅಣಕು ಕಾರ್ಯಚರಣೆ ಮಾಡಲಾಗುವುದು.

ಮಧ್ಯಾಹ್ನ 4 ಗಂಟೆಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಒಳಗಡೆ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಹಾಗೂ ಅಣೆಕಟ್ಟು ಒಡೆದು ಅನಾಹುತ ಸಂಭವಿಸಿದಾಗ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತಂತೆ ಸಂಜೆ 6 ಗಂಟೆಗೆ ಅಣಕು ಕಾರ್ಯಚರಣೆ ಮಾಡಲಾಗುವುದು. ಈ ಸಂಬಂಧ ನದಿ ಪಾತ್ರದ ಅರಟುಗಾ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿಯ ಜನರನ್ನು ಸಿದ್ದರ ಗ್ರಾಮದ ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸುವ ಕುರಿತಂತೆ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದರು.
ಸಂಜೆ 6 ಗಂಟೆಗೆ ರವೀಂದ್ರ ನಾಥ್ ಟಾಗೋರ್ ಬೀಚ್‌ನಲ್ಲಿ ಬಾಂಬ್ ದಾಳಿಯಾದ ಸಂದರ್ಭದಲ್ಲಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ ಕುರಿತು ಅಣಕು ಕಾರ್ಯಚರಣೆಯನ್ನು ಹಾಗೂ ರಾತ್ರಿ 7.30 ರಿಂದ 8 ಗಂಟೆಯ ಅವಧಿಯಲ್ಲಿ ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಮತ್ತು ಕೈಗಾ ಟೌನ್‌ಶಿಪ್‌ನಲ್ಲಿ ಬ್ಲಾಕ್ ಔಟ್ ಅಣುಕು ಕಾರ್ಯಾಚರಣೆ ನಡೆಸಲಾಗುವುದು ಈ ಸಂದರ್ಭದಲ್ಲಿ ನಾಗರೀಕರು ಸ್ವಯಂ ಪ್ರೇರಣೆಯಾಗಿ ತಮ್ಮ ಮನೆಯ ಲೈಟ್‌ಗಳನ್ನು ಆಫ್ ಮಾಡಿ, ಸುರಕ್ಷಿತವಾಗಿ ಮನೆಯೊಳಗೆ ಇರಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ವಾಹನ ನಿಲ್ಲಿಸಿ, ಸುರಕ್ಷಿತ ಕಟ್ಟಡದ ಒಳಗೆ ಹೋಗಿ ರಕ್ಷಣೆ ಪಡೆಯುವ ಕುರಿತಂತೆ ಅಣಕು ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೃಷ್ಣಮೂರ್ತಿ, ಜಗದೀಶ್, ನೌಕಾನೆಲೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು.