ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕಾರಿನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್! ಹೊಸ ರಾಜಕೀಯ ಬೆಳವಣಿಗೆ ಏನು?
ಕಾರವಾರ :- ಬಿಜೆಪಿಯ ಪ್ರಸಕ್ತ ರಾಜಕಾರಣದಲ್ಲಿ ತಟಸ್ತರಾಗಿದ್ದ ಸಂಸದ ಅನಂತಕುಮಾರ್ ಹೆಗಡೆ ಇಂದು ಕಾರವಾರದ ಜಿಲ್ಲಾಪಂಚಾಯ್ತಿ ಕಚೇರಿಯಲ್ಲಿ ನಡೆದ ದಿಶಾ ಸಭೆಗೆ ಆಗಮಿಸುವ ಮೂಲಕ ತಾನು ಪ್ರಸಕ್ತ ರಾಜಕೀಯದಲ್ಲಿರುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆದರೇ ಇಂದು ಕಾರವಾರದಲ್ಲಿ ಹೊಸ ಬೆಳವಣಿಗೆಗೆ ಅನಂತಕುಮಾರ್ ಹೆಗಡೆ ಆಗಮನ ಸಾಕ್ಷಿಯಾಗಿದೆ.
ಕಾಂಗ್ರೆಸ್ ನ ಶಾಸಕ ಸತೀಶ್ ಸೈಲ್ ರವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಬ್ಬಿ ಕುಷಲೋಪರಿ ಕೇಳಿದರೇ, ಸಭೆ ನಂತರ ತಮ್ಮ ಕಾರಿನಲ್ಲೇ ಅನಂತಕುಮಾರ್ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ರನ್ನು ಐಬಿಗೆ ಕರೆದುಕೊಂಡು ಹೋಗಿ ಮಾತೂಕತೆ ನಡೆಸಿದರು.
ಹೊಸ ರಾಜಕೀಯ ಬೆಳವಣಿಗೆ ಏನು?

ಸತೀಶ್ ಸೈಲ್ ಹಿಂದಿನ ಚುನಾವಣೆಯಲ್ಲೇ ಬಿಜೆಪಿಗೆ ಆಗಮಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಈ ಹಿಂದೆ ಕೂಡ ಅನಂತಕುಮಾರ್ ಹೆಗಡೆ ಕುದ್ದು ಬಿಜೆಪಿಗೆ ಬರುವಂತೆ ಸೈಲ್ ಗೆ ಆಹ್ವಾನ ನೀಡಿದ್ದರು. ಆದರೇ ರೂಪಾಲಿ ನಾಯ್ಕ ರವರು ಹಾಲಿ ಶಾಸಕರಾಗಿದ್ದು ಜೊತೆಗೆ ಯಡಿಯೂರಪ್ಪನವರ ಕೃಪಾ ಕಟಾಕ್ಷ ಇದ್ದಿದ್ದರಿಂದ ಬಿಜೆಪಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಮ್ಮಿ ಇದ್ದಿದ್ದರಿಂದ ಸೈಲ್ ತಟಸ್ಥವಾಗಿ ಉಳಿಯುವಂತೆ ಆಗಿತ್ತು. ಇನ್ನು ಕರಾವಳಿ ಭಾಗದಲ್ಲಿ ಮೂರು ಕ್ಷೇತ್ರಕ್ಕೂ ಹೊಸ ಅಭ್ಯರ್ಥಿ ಹಾಕಬೇಕು ಎಂಬ ನಿಲುವು ಅನಂತ್ ಕುಮಾರ್ ಹೆಗಡೆಯದ್ದಾಗಿತ್ತು. ಆದರೇ ಪಕ್ಷ ಬದಲಾವಣೆ ಮಾಡಲು ಒಪ್ಪದಿದ್ದಾಗ ಅನಂತಕುಮಾರ್ ಹೆಗಡೆ ಪ್ರಚಾರಕ್ಕೆ ಸಹ ಬಾರದೇ ಕರಾವಳಿಯಲ್ಲಿ ಬಿಜೆಪಿ ಸೋಲಿಗೆ ನೇರ ಕಾರಣರಾಗಿದ್ದರು.

ಸದ್ಯ ಸತೀಶ್ ಸೈಲ್ ಕಾಂಗ್ರೆಸ್ ನಲ್ಲಿ ಇದ್ದರೂ ಡಿಕೆ ಶಿವಕುಮಾರ್ ಕೃಪೆಯಿಂದಷ್ಟೇ ಉಳಿದುಕೊಂಡಿದ್ದಾರೆ ಎಂಬ ಮಾತು ಪಕ್ಷದಲ್ಲೇ ಕೇಳಿ ಬರುತಿತ್ತು. ಇದಕ್ಕೆ ಸಾಕ್ಷಿಯಂತೆ ಕಾಂಗ್ರೆಸ್ ನಾಯಕರನ್ನು ಪ್ರಚಾರಕ್ಕೆ ಸಹ ಬಳಸಿಕೊಂಡಿರಲಿಲ್ಲ. ಈಗಲೂ ಪಕ್ಷದ ಹಲವು ಕಾರ್ಯಚಟುವಟಿಕೆಯಲ್ಲಿ ದೂರ ಇದ್ದಾರೆ. ಇನ್ನು ಸಿ.ಬಿ.ಐ ಪ್ರಕರಣದಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಇದೆ. ಇದಲ್ಲದೇ ಒಂದುಬಾರಿಯೂ ಬಿಜೆಪಿ ಹಾಗೂ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸೈಲ್ ವಿರೋಧ ಮಾತನಾಡಿಲ್ಲ. ಹೆಗಡೆ ಜೊತೆ ಸೈಲ್ ಉತ್ತಮ ಬಾಂಧವ್ಯ ಗಟ್ಟಿಗೊಳಿಸಿಕೊಂಡಿದ್ದರೇ ಇತ್ತ ಮಾಜಿ ಶಾಸಕಿ ರೂಪಾಲಿ ನಾಯ್ಕ ದೂರ ಸರಿದಿದ್ದಾರೆ. ಹೀಗಾಗಿ ಸೈಲ್ ಗೆ ಅನಂತ್ ಕುಮಾರ್ ಹೆಗಡೆ ಹೆಚ್ಚು ಹತ್ತಿರವಾಗಿದ್ದಾರೆ .ಇನ್ನು ಶೀಘ್ರದಲ್ಲಿ ಲೋಕಸಭಾ ಚುನಾವಣೆ ಸಹ ಹತ್ತಿರ ಬರುತ್ತಿರುವುದರಿಂದ ಅನಂತಕುಮಾರ್ ಹೆಗಡೆ ಹಾಗೂ ಸೈಲ್ ಭೇಟಿ ಸಾಕಷ್ಟು ಮಹತ್ವ ತಂದುಕೊಟ್ಟಿದೆ.